ಪ್ರಕಾಶ ಆರ್.ಎಂ ಮಾನವ ಸಂಪನ್ಮೂಲ ಮುಖ್ಯಸ್ಥರು ಸೊಲೈಜ಼್ ಇಂಡಿಯಾ ಟಿಕ್ನಾಲಜೀಸ್ ಪ್ರವೇಟ್ ಲಿಮಿಟೆಡ್ ಪೀಠಿಕೆ: ಇತ್ತೀಚಿನ ದಿನಗಳಲ್ಲಿ ಉದ್ಯಮ 4.0 ಬಗ್ಗೆ ಹೆಚ್ಚಾಗಿ ಮಾತನಾಡುವುದನ್ನು ಸಂಸ್ಥೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಮೇಕೆನ್ಸಿ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ 2025 ರ ಒಳಗೆ ಕಾರ್ಖಾನೆಗಳಲ್ಲಿ ವಸ್ತುಗಳ ಅಂತರ್ಜಾಲದ ಬಳಕೆಯಿಂದಾಗಿ, ಸುಮಾರು 84 ಲಕ್ಷ ಕೋಟಿ ರೂಪಾಯಿಯಿಂದ 216 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ, ಉದ್ಯಮ 4.0 ಬಗ್ಗೆ ತಿಳಿದುಕೊಳ್ಳುವುದು ಮಾನವ ಸಂಪನ್ಮೂಲ ವೃತ್ತಿನಿರತರು ಸೇರಿದಂತೆ ಎಲ್ಲರಿಗೂ ಅನಿವಾರ್ಯವಾಗಿದೆ. ಉದ್ಯಮ 4.0 ನವಯುಗದ ಕೈಗಾರಿಕಾ ಕ್ರಾಂತಿಯಾಗಿದ್ದರೂ, ಈ ಹಿಂದಿನ ಮೂರು ಕೈಗಾರಿಕಾ ಕ್ರಾಂತಿಗಳ ಮುಂದುವರೆದ ಭಾಗವಾಗಿದೆ. ಹಾಗಾದರೆ, ಕೈಗಾರಿಕಾ ಕ್ರಾಂತಿಯು ಹಿಂದಿನ ಕಾಲದಿಂದ ಇಂದಿನವರೆಗೂ ಹೇಗೆ ವಿಕಸನಗೊಂಡಿದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಮೊದಲ ಕೈಗಾರಿಕಾ ಕ್ರಾಂತಿ - ಉದ್ಯಮ 1.0: ಮೊದಲ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕೈಗಾರಿಕಾ ಉತ್ಪಾದನೆಯು ಭೌತಿಕ ಬಲದಿಂದ ಯಂತ್ರ ಶಕ್ತಿಗೆ ವಿಕಸನಗೊಂಡಿತು. ಉಗಿ ಶಕ್ತಿಯ ಬಳಕೆ ಮೊದಲ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಆರಂಭವಾದ್ದರಿಂದ ಕಲ್ಲಿದ್ದಲಿನ ಬಳಕೆ ಅತ್ಯಂತ ಹೆಚ್ಚು ಜನಪ್ರಿಯವಾಯಿತು. ಪರಿಣಾಮವಾಗಿ ಸುಧಾರಿತ ಗುಣಮಟ್ಟದ ವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಸಹಕಾರಿಯಾಯಿತು. ಇಂಗ್ಲೆಂಡ್ನಲ್ಲಿ ಆರಂಭಗೊಂಡ ಈ ಕ್ರಾಂತಿಯು ಅಲ್ಪಾವಧಿಯಲ್ಲಿಯೇ ಯೂರೋಪ್, ಅಮೇರಿಕ ಮತ್ತು ಇತರೆ ದೇಶಗಳಿಗೆ ವ್ಯಾಪಿಸಿತು. ಇದು ಉತ್ಪಾದನೆಯಲ್ಲಿ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿತು. ಎರಡನೆಯ ಕೈಗಾರಿಕಾ ಕ್ರಾಂತಿ - ಉದ್ಯಮ 2.0: ಎರಡನೇ ಕೈಗಾರಿಕಾ ಕ್ರಾಂತಿಯನ್ನು ತಾಂತ್ರಿಕ ಕ್ರಾಂತಿ ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ವಿದ್ಯುಚ್ಛಕ್ತಿ ಬಳಕೆಗೆ ಬಂದಿತು. ಉತ್ಪಾದನಾ ಪ್ರಮಾಣ ಅಧಿಕವಾಗುತ್ತಾ, ಸಾಮೂಹಿಕ ಉತ್ಪಾದನೆಯು ಉಗಮಗೊಂಡಿತು. ಕಬ್ಬಿಣ ಮತ್ತು ಉಕ್ಕಿನ ಕಚ್ಛಾವಸ್ತುಗಳು ವ್ಯಾಪಕವಾಗಿ ಹರಡಿ ಬೃಹತ್ ಉದ್ಯಮಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿತು. ರೈಲು ಮತ್ತು ಇತರೆ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಯಿಂದಾಗಿ ಉತ್ಪಾದಿತ ವಸ್ತುಗಳಿಗೆ ವ್ಯಾಪಕ ಮಾರುಕಟ್ಟೆ ದೊರಕಿತು. ಮೂರನೆ ಕೈಗಾರಿಕಾ ಕ್ರಾಂತಿ - ಉದ್ಯಮ 3.0: 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ರಾರಂಭವಾದ ಮೂರನೇ ಕೈಗಾರಿಕಾ ಕ್ರಾಂತಿಯು, ಮೊದಲೆರಡು ಕೈಗಾರಿಕಾ ಕ್ರಾಂತಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾದದ್ದು. ಈ ಅವಧಿಯಲ್ಲಿ ಪರಮಾಣುಶಕ್ತಿ, ಎಲೆಕ್ಟ್ರಾನಿಕ್ ಟ್ರಾನ್ಸಿಸ್ಟರ್ ಮತ್ತು ಮೈಕ್ರೊ ಪ್ರೊಸೆಸರ್ಗಳ ಬಳಕೆಯಿಂದಾಗಿ ದೂರ ಸಂಪರ್ಕ ಮತ್ತು ಕಂಪ್ಯೂಟರ್ಗಳ ಬಳಕೆ ಗಣನೀಯವಾಗಿ ಹೆಚ್ಚಾಯಿತು. ವಿಶೇಷವಾಗಿ ಕಂಪ್ಯೂಟರ್ ಹಾಗೂ ಸಂವಹನ ತಂತ್ರಜ್ಞಾನದ ಬಳಕೆಯನ್ನು ಉತ್ಪಾದನಾ ಕಾರ್ಯದಲ್ಲಿ ಅತಿ ಹೆಚ್ಚಾಗಿ ಅಳವಡಿಸಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಯಂತ್ರಗಳು ಮನುಷ್ಯನ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾದವು ಹಾಗೂ ಮಾನವನ ಭೌತಿಕ ಶಕ್ತಿಯ ಬಳಕೆಯ ಅಗತ್ಯತೆ ಕಡಿಮೆಯಾಗಲು ಪ್ರಾರಂಭವಾಯಿತು. ನಾಲ್ಕನೇ ಕೈಗಾರಿಕಾ ಕ್ರಾಂತಿ - ಉದ್ಯಮ 4.0: ಉದ್ಯಮ 4.0 ಎಂದು ಕರೆಯಲ್ಪಡುವ 4ನೇ ಕೈಗಾರಿಕಾ ಕ್ರಾಂತಿಯು ಡಿಜಿಟಲೀಕರಣದ ಭಾಗವಾಗಿದೆ. ಇದು ಪರಸ್ಪರ ಸಂಪರ್ಕ, ಯಾಂತ್ರೀಕರಣ, ಯಂತ್ರ ಕಲಿಕೆ (Machine Learning) ಹಾಗೂ ನೈಜ ಸಮಯದ ದತ್ತಾಂಶಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. ಉದ್ಯಮ 4.0 ನ್ನು ಕೆಲವೊಮ್ಮೆ ಅಂತರ್ಜಾಲ ವಸ್ತುಗಳು (Internet of Things) ಅಥವಾ ಸ್ಮಾರ್ಟ್ (Smart) ಉತ್ಪಾದನೆ ಎಂದು ಕರೆಯಲಾಗಿದ್ದು, ಇದು ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿ (Supply Chain Management) ಹೆಚ್ಚು ಸಮಗ್ರವಾದ ಮತ್ತು ಅತ್ಯುತ್ತಮವಾದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ ನೈಜ ಸಮಯದಲ್ಲಿ ಹಾಗೂ ತ್ವರಿತಗತಿಯಲ್ಲಿ ನಿರ್ಧರಿಸಲು ಸಹಕಾರಿಯಾಗುತ್ತದೆ. ಮೂಲಭೂತವಾಗಿ ಉಧ್ಯಮ 4.0 ಎನ್ನುವುದು ಉತ್ಪಾದನ ತಂತ್ರಜ್ಞಾನಗಳು ಮತ್ತು ಉತ್ಪಾದನೆಯ ಪ್ರಕ್ರಿಯೆಗಳನ್ನೂ ಯಾಂತ್ರೀಕರಿಸಿ ಒಂದನ್ನೊಂದು ಸಂಪರ್ಕಿಸಿ ದತ್ತಾಂಶ ವಿನಿಮಯಗೊಳಿಸುವ ವಿಧಾನವಾಗಿದೆ. ಪ್ರತಿಯೊಂದು ಸಂಸ್ಥೆಯ ಮೂಲ ಧ್ಯೇಯೋದ್ದೇಶ ಗ್ರಾಹಕರ ಸಂತೃಪ್ತಿಯಾಗಿದೆ. ಪ್ರತಿ ಕಾರ್ಖಾನೆ ಅಥವಾ ಸಂಸ್ಥೆಯು ಹಲವು ರೀತಿಯಲ್ಲಿ ವಿಭಿನ್ನವಾಗಿದ್ದರೂ ಸಂಸ್ಥೆಯು ಗ್ರಾಹಕರಿಂದ ಸೇವೆ ಅಥವಾ ಉತ್ಪನ್ನಗಳನ್ನು ಮುಂಗಡವಾಗಿ ಕಾಯ್ದಿರಿಸುವುದರಿಂದ ಹಿಡಿದು ಆ ಸೇವೆ ಅಥವಾ ಆ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಗ್ರಾಹಕರಿಗೆ ತಲುಪಿಸುವವರೆಗಿನ ಎಲ್ಲಾ ಪ್ರಕ್ರಿಯೆಗಳನ್ನೂ, ಎಲ್ಲಾ ಸಹಭಾಗಿಗಳನ್ನು (vendors, subcontractors, organizations), ಉತ್ಪನ್ನಗಳನ್ನು ಜನಸಮೂಹವನ್ನು (Real Time) ನೈಜ ಸಮಯದಲ್ಲಿ ಸಂಪರ್ಕಿಸಿ ಅವು ಮತ್ತು ಅವರುಗಳಿಂದ ಒಳನೋಟಗಳನ್ನು ಪಡೆಯುವುದು ಎಲ್ಲಾ ಸಂಸ್ಥೆಗಳ ಸಾಮಾನ್ಯ ಸವಾಲಾಗಿದೆ. ಉದ್ಯಮ 4.0 ಕಾರ್ಯರೂಪಕ್ಕೆ ಬರುವುದು ಇಲ್ಲಿಯೇ ಅಂದರೆ ಉದ್ಯಮ 4.0 ಕೇವಲ ಉತ್ಪಾದನಾ ದಕ್ಷತೆಯನ್ನು ಸುಧಾರಿಸಲು ಹೊಸ ತಂತ್ರಜ್ಞಾನ ಮತ್ತು ಸಾಧನಗಳಲ್ಲಿ ಹೂಡಿಕೆ ಮಾಡುವುದಲ್ಲ. ಇದು ಒಂದು ಸಂಸ್ಥೆಯ ಅಥವಾ ಕಾರ್ಖಾನೆಯ ಸಂಪೂರ್ಣ ವ್ಯವಹಾರದ ಕಾರ್ಯನಿರ್ವಹಣೆ, ದಕ್ಷತೆ, ಮತ್ತು ಅಭಿವೃದ್ಧಿಯಲ್ಲಿ ಕ್ರಾಂತಿಯನ್ನುಂಟು ಮಾಡುವುದಾಗಿದೆ. ಉದ್ಯಮ 4.0 ಹಿನ್ನೆಲೆ: ಉದ್ಯಮ 4.0 ನ್ನು ಮೊದಲ ಬಾರಿಗೆ 2011 ರಲ್ಲಿ ಜರ್ಮನಿಯ ಪ್ರಮುಖ ಸಂಸ್ಥೆಗಳಾದ ಬಿಟ್ಕಾಮ್ ಡಿಜಿಟಲ್ ಅಸೋಸಿಯೇಶನ್, ಜರ್ಮನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರ ಸಂಘ ಮತ್ತು ಜರ್ಮನ್ ಎಂಜಿನಿಯರಿಂಗ್ ಫೆಡರೇಷನ್ಗಳ ಸಹಯೋಗದೊಂದಿಗೆ ಉದ್ಯಮ 4.0 ಎಂಬ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಅಧ್ಯಕ್ಷತೆಯನ್ನು ಬಾಷ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸೀಗ್ಪ್ರೈಡ್ ಡೈಸ್ (Siegfried Dais) ಹಾಗೂ ಉಪಾಧ್ಯಕ್ಷರಾಗಿ ಶ್ರೀ ಹೆನ್ನಿಂಗ್ ಕಾಗರ್ಮನ್ (Henning Kagermann) ರವರು ವಹಿಸಿ, ಈ ಸಮಿತಿಯು 08-04-2013 ಹ್ಯಾನೋವರ್ ವ್ಯಾಪಾರ ಮೇಳದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ನಂತರದ ದಿನಗಳಲ್ಲಿ ಉದ್ಯಮ 4.0 ತತ್ವಗಳನ್ನು ವಿವಿಧ ಸಂಸ್ಥೆಗಳು ತಮ್ಮ ಸಂಸ್ಥೆಗಳಿಗೆ ಅನ್ವಯಿಸುವಂತೆ ಪುನರ್ ನಾಮಕರಣ ಮಾಡಿಕೊಂಡಿವೆ. ಉದಾ:- ಇಂಧನ ನಿರ್ವಹಣೆ ಮತ್ತು ಆಟೋಮೇಶನ್ನಲ್ಲಿ ಜಾಗತಿಕ ಸಂಸ್ಥೆಯಾದ ಸ್ನೈಡರ್ ಎಲೆಕ್ಟ್ರಿಕ್ ತನ್ನದೇ ಆದ ಉದ್ಯಮ 4.0 ನ್ನು ಅನುಗುಣವಾದ, ಸುಸ್ಥಿರ ಮತ್ತು ಸಂಪರ್ಕ 4.0 (Tailored, Sustainable & Connect 4.0 ಅಥವಾ TSC 4.0) ಎಂದು ಕರೆಯಲಾಗುತ್ತದೆ. ಇನ್ನೊಂದು ಉದಾಹರಣೆ ಕೊಡುವುದಾದರೆ ಏರೋಸ್ಪೇಸ್ ಭಾಗಗಳ ತಯಾರಿಕಾ ಸಂಸ್ಥೆಯಾದ ಮೆಗ್ಗಿಟ್ ಪಿಎಲ್ಸಿ (Meggitt PLC) ತನ್ನದೇ ಆದ ಉದ್ಯಮ 4.0 ಅನ್ನು ಸಂಶೋಧನ ಯೋಜನೆ ಎಂ.4 (Research Project 4.0) ಎಂದು ಮರುನಾಮಕರಣ ಮಾಡಿದೆ. ಉದ್ಯಮ 4.0 ತತ್ವಗಳು ಮತ್ತು ಗುರಿಗಳು: ಉದ್ಯಮ 4.0 ನಲ್ಲಿ ಪ್ರಮುಖವಾಗಿ ನಾಲ್ಕು ತತ್ವಗಳನ್ನು ಗುರುತಿಸಬಹುದು
ಉದ್ಯಮ 4.0 ತಾಂತ್ರಿಕ ನೆಲೆಗಳು: ಉದ್ಯಮ 4.0 ಎನ್ನುವುದು ಅನೇಕ ಅಂಶಗಳನ್ನು ಒಳಗೊಂಡಿರುವ ಒಂದು ಅಮೂರ್ತ ಮತ್ತು ಸಂಕೀರ್ಣ ಪದವಾಗಿದೆ. ಇದನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಕೆಲವು ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಅವುಗಳೆಂದರೆ :-
ಈ ಮೇಲಿನ ತಂತ್ರಜ್ಞಾನಗಳಲ್ಲಿ ಕೆಲವು ಮುಖ್ಯವಾದ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳೋಣ.
ಮಾನವ ಸಂಪನ್ಮೂಲ ನಿರ್ವಹಣೆಯ ಮೇಲೆ ಉದ್ಯಮಿ 4.0 ಪರಿಣಾಮ: ವಿಶ್ವದ ಆರ್ಥಿಕ ವೇದಿಕೆಯ ಭವಿಷ್ಯದ ಉದ್ಯೋಗಗಳು ಎಂಬ ಒಂದು ವರದಿಯ ಪ್ರಕಾರ ಪ್ರಸ್ತುತ ಶಾಲೆಗೆ ಹೋಗುತ್ತಿರುವ ಶೇ. 65% ರಷ್ಟು ಮಕ್ಕಳು ಶಾಲಾ ಶಿಕ್ಷಣವನ್ನು ಪೂರೈಸಿದಾಗ, ಇನ್ನೂ ಅಸ್ತಿತ್ವದಲ್ಲಿ ಇರುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅಂದರೆ ಭವಿಷ್ಯದ ವ್ಯವಹಾರದ ಮೇಲೆ ಹಾಗೂ ಮಾನವ ಸಂಪನ್ಮೂಲದ ಮೇಲೆ ತಂತ್ರಜ್ಞಾನಗಳು ಅಗಾಧ ಪರಿಣಾಮವನ್ನು ಬೀರುತ್ತವೆ. ಸಾಮಾಜಿಕ, ಆರ್ಥಿಕ, ಭೌಗೋಳಿಕ, ಪರಿಣಾಮವಲ್ಲದೆ, ಹೊಸ ವ್ಯಾಪಾರದ ವಿಭಾಗಗಳು, ನವ ನವೀನ ವೃತ್ತಿಗಳ ಉದಯಕ್ಕೆ ಕಾರಣವಾಗುತ್ತದೆ. ಈ ಬೆಳವಣಿಗೆಗಳು ಹೊಸ ರೀತಿಯ ಕೌಶಲ್ಯಗಳ ಕಲಿಕೆಯನ್ನು ಪ್ರಚೋದಿಸುತ್ತವೆ ಮತ್ತು ವಿವಿಧ ವೃತ್ತಿನಿರತರು ಉದ್ಯೋಗಗಳಲ್ಲಿ ಮುಂದುವರಿಸಬೇಕಾದರೆ ಈ ನವೀನ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಲೇಬೇಕಾಗುತ್ತದೆ. ಈ ಬದಲಾವಣೆಯ ವೇಗಕ್ಕೆ ತಮ್ಮನ್ನು ಅಳವಡಿಸಿಕೊಳ್ಳದವರು ಉದ್ಯೋಗ ಜಗತ್ತಿನಿಂದ ಕಣ್ಮರೆಯಾಗುವ ಸಾಧ್ಯತೆ ಇದೆ. ಉದ್ಯಮ 4.0 ಸಂಸ್ಥೆಗಳು, ಸಂಘಗಳು, ರಾಜ್ಯಗಳು, ಸರ್ಕಾರಗಳು ಮತ್ತು ಉದ್ಯೋಗಗಳ ಮೇಲೆ ಮೂಲಭೂತವಾಗಿ ಪರಿಣಾಮ ಬೀರುತ್ತದೆ. ಉದ್ಯಮ 4.0 ಯು ಉತ್ಪಾದನೆಯಿಂದ ವಿತರಣೆಯವರೆಗೂ ಎಲ್ಲಾ ಹಂತಗಳಲ್ಲೂ ಅಮೂಲಾಗ್ರವಾಗಿ ಬದಲಾವಣೆ ಬೀರುವುದರಿಂದ ಸಂಸ್ಥೆಗಳು ಹೊಸ ಆವಿಷ್ಕಾರಗಳಿಗೆ ಹೆಚ್ಚು ಒತ್ತುಕೊಡುತ್ತವೆ. ಈ ಆವಿಷ್ಕಾರಗಳ ಕೇಂದ್ರ ಮಾನವ ಸಂಪನ್ಮೂಲವೇ ಆಗಿವೆ. ಮಾನವ ಸಂಪನ್ಮೂಲ ವೃತ್ತಿನಿರತರು ಕೇವಲ ಕೆಲಸಕ್ಕಾಗಿ ನೌಕರನಾಗಿ ಕೆಲಸ ಮಾಡದೆ ಒಬ್ಬ ಪಾಲುದಾರನಂತೆ ಸಂಸ್ಥೆಯ ವ್ಯವಹಾರದ ಭಾಗಿಯಾಗಿ, ಹಣಕಾಸಿನ ದತ್ತಾಂಶವನ್ನು ಅರ್ಥ ಮಾಡಿಕೊಳ್ಳಬಲ್ಲ ಮತ್ತು ಅರ್ಥೈಸಬಲ್ಲ ಮಾನವ ಸಂಪನ್ಮೂಲ ತಜ್ಞನಾಗಿ ನಮ್ರತೆಯಿಂದ (Agile) ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಬೇಕಾಗುತ್ತದೆ.
ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ಹಿಂದಿನ ಸ್ನಾಯುಶಕ್ತಿ ಪ್ರಭಾವ ಕಡಿಮೆಯಾಗಿ, ಮನಸ್ಸಿನ ಅಥವಾ ಬುದ್ಧಿಶಕ್ತಿ ಹೆಚ್ಚು ಮಹತ್ವ ಸಿಗುತ್ತವೆ. ರೋಬೋಟ್ಗಳು ಮತ್ತು ಜನರು ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ ಹೀಗೆ ರೋಬೋಟ್ಗಳೊಂದಿಗೆ ಸಾಮರಸ್ಯದಿಂದ ಕೆಲಸ ನಿರ್ವಹಿಸುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಮಾನವ ಸಂಪನ್ಮೂಲ ವೃತ್ತಿನಿರತರಿಗೆ ಕಷ್ಟಕರವಾಗಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಉದ್ಯಮ 4.0 ಮತ್ತು ನವ ನವೀನ ತಂತ್ರಜ್ಞಾನಗಳು ಪ್ರತಿಯೊಂದು ಕ್ಷೇತ್ರದ ಮೇಲೂ ಮಹತ್ತರವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಎಲ್ಲಾ ಆವಿಷ್ಕಾರಗಳ ಕೇಂದ್ರ ಬಿಂದು ಮಾನವ ಸಂಪನ್ಮೂಲವೇ ಆಗಿರುವುದರಿಂದ ಮಾನವ ಸಂಪನ್ಮೂಲದ ನೇಮಕಾತಿಯಿಂದ ಹಿಡಿದು ಒಬ್ಬ ಉದ್ಯೋಗಿ ನಿರ್ಗಮನದವರೆಗಿನ ಎಲ್ಲಾ ಹಂತಗಳಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ಅಮೂಲಾಗ್ರವಾಗಿ ಪರಿಣಾಮ ಬೀರುತ್ತದೆ. References:
1 Comment
|
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |