ಎಸ್.ವಿ. ಮಂಜುನಾಥ್ ಸಹ ನಿರ್ದೇಶಕರು, ಕನ್ನಡ ಉಪಕ್ರಮಗಳು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ, ಬೆಂಗಳೂರು ಸಾರಾಂಶ: ಕರ್ನಾಟಕದಲ್ಲಿ ಕಾರ್ಯೋನ್ಮುಖವಾಗಿರುವ ಮಾನವ ಸಂಪನ್ಮೂಲ ಕ್ಷೇತ್ರದ ವೃತ್ತಿಪರರು ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣವನ್ನು ತಮ್ಮ ಸಾಂಸ್ಥಿಕ ಕಟ್ಟುಪಾಡುಗಳ ಪರಿಧಿಯಲ್ಲೇ ಹಲವು ರೀತಿಗಳಲ್ಲಿ ನಿರ್ಮಿಸಬಹುದು. ಈ ಮಹತ್ತರವಾದ ಅಂಶವನ್ನು ಗುರುತಿಸುತ್ತಲೇ ಸುಮಾರು 20 ವರ್ಷಗಳ ಮಾನವ ಸಂಪನ್ಮೂಲ ಕ್ಷೇತ್ರದ ವಿಸ್ತೃತ ಅನುಭವದ ಹಿನ್ನೆಲೆಯಲ್ಲಿ ಲೇಖಕರು ತಮ್ಮ ವೃತ್ತಿಧರ್ಮಕ್ಕೆ ನ್ಯಾಯ ಒದಗಿಸುವುದರೊಂದಿಗೆ ಒಟ್ಟಾರೆ ಸಾಂಸ್ಥಿಕ ಹೊಣೆಗಾರಿಕೆಗಳಿಗೆ ಚ್ಯುತಿಯಾಗದಂತೆ ವಿವೇಚನೆಯಿಂದಲೇ ಕನ್ನಡದ ಕೆಲಸವನ್ನು ಅಭಿಮಾನದಿಂದ ಪೂರೈಸಿದ ಹಿನ್ನೆಲೆಯಲ್ಲಿ ಈ ಮಣ್ಣಿನ ಸಂಸ್ಕೃತಿ, ಭಾಷೆ, ಸೊಗಡನ್ನು ವೃತ್ತಿಬಾಂಧವರು ಪೋಷಿಸಬಹುದಾದ ಹಲವು ಸಾಧ್ಯತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಮಾನವಸಂಪನ್ಮೂಲ ವಿಭಾಗ ನಿರ್ವಹಿಸುವ ಆರು ಪ್ರಮುಖ ಜವಾಬ್ದಾರಿ ಕ್ಷೇತ್ರಗಳಲ್ಲಿ ವೃತ್ತಿ ಬದ್ಧತೆಯೊಂದಿಗೆ ಕನ್ನಡದ ಕಂಪನ್ನು ಹದವಾಗಿ ಬೆರೆಸಿ, ಪಸರಿಸಬಹುದಾದ ಸಾಧ್ಯತೆಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಗುರುತಿಸಿದ್ದಾರೆ. ಎಲ್ಲ ಭಾಗೀದಾರರ ಏಳ್ಗೆಯನ್ನು ಸಾಕಾರಗೊಳಿಸುತ್ತ ಅವರ ಬಾಳಿನ ದಾರಿದೀಪವಾಗುವ ವಿಶಿಷ್ಟ ಅವಕಾಶ ಈ ವಿಭಾಗದ ವೃತ್ತಿಪರರಿಗಿದೆಯೆಂಬ ಉದಾತ್ತ ಆಲೋಚನೆಯೊಂದಿಗೆ ಸಂಸ್ಥೆಯ ದೀರ್ಘಕಾಲಿಕ ಹಿತವನ್ನು ಕಾಪಾಡುತ್ತಲೇ ಹಲವು ಜನರ ಬಾಳ ಹಣತೆಗಳನ್ನು ಬೆಳಗಬಹುದಾದ ಸಾಧ್ಯತೆಯನ್ನು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿದೆ ಎಂದು ಲೇಖಕರು ಕಂಡುಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ನೆಲೆಗಳಲ್ಲಿ ವೃತ್ತಿಬಾಂಧವರು ಕನ್ನಡದ ಹಣತೆಗಳಾಗಿ ಬೆಳಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್ಯರು ಕನ್ನಡ ಉಳಿಸಿ ಎಂಬ ಕವನದಲ್ಲಿ, ಕನ್ನಡ ಜನವಲ್ಲದೆ ಕನ್ನಡವನ್ನು ಉಳಿಸುವರಾರೈ ಬೆಳೆಸುವರಾರೈ ಎಂದು ಮಾರ್ಮಿಕವಾಗಿ ಎತ್ತಿರುವ ಪ್ರಶ್ನೆ ಕರ್ನಾಟಕದ ಈ ಹೊತ್ತಿನ ಮಾನವ ಸಂಪನ್ಮೂಲ ವೃತ್ತಿಪರ ಸಮುದಾಯವನ್ನು ಆಳವಾದ ಚಿಂತನೆಗೆ ಹಚ್ಚುವಂತಿದೆ. (ಕನ್ನಡ ಉಳಿಸಿ, ಪು.ತಿನ., ಕನ್ನಡ-ಕನ್ನಡಿಗ-ಕರ್ನಾಟಕ, ಪು.17, ಸಪ್ನ ಬುಕ್ ಹೌಸ್, ಬೆಂ. 2016) ಕರ್ನಾಟಕದಲ್ಲಿ ಕಾರ್ಯೋನ್ಮುಖವಾಗಿರುವ ಮಾನವ ಸಂಪನ್ಮೂಲ ಕ್ಷೇತ್ರದ ವೃತ್ತಿಪರರು ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣವನ್ನು ತಮ್ಮ ಸಾಂಸ್ಥಿಕ ಕಟ್ಟುಪಾಡುಗಳ ಪರಿಧಿಯಲ್ಲೇ ಹಲವು ರೀತಿಗಳಲ್ಲಿ ನಿರ್ಮಿಸಬಹುದು. ಸಂಸ್ಥೆಯಲ್ಲಿ ಕಾರ್ಮಿಕ ವರ್ಗ ಮತ್ತು ಆಡಳಿತವರ್ಗದ ನಡುವೆ ಸೌಹಾರ್ದತೆಯನ್ನು ಬೆಳೆಸಿ ಪರಸ್ಪರ ಏಳ್ಗೆ ಮತ್ತು ದೀರ್ಘಕಾಲಿಕ ಬೆಳವಣಿಗೆಯನ್ನು ಸಾಧಿಸಲು ಅವಶ್ಯಕವಾದ ಪೂರಕ ಸನ್ನಿವೇಶಗಳನ್ನು ಉಂಟು ಮಾಡಬಹುದಾಗಿದೆ. ಈ ಸಂಬಂಧವಾಗಿ ಕನ್ನಡ-ಕನ್ನಡಿಗ-ಕರ್ನಾಟಕ (ಪು.438-9 ಸಪ್ನ ಬುಕ್ ಹೌಸ್. ಬೆಂ. 2016) ಕೃತಿಯಲ್ಲಿ ಕನ್ನಡಪರ ಸಂಘ-ಸಂಸ್ಥೆಗಳು ಮತ್ತು ಕಾರ್ಯಕರ್ತರು ಕೈಗೊಳ್ಳಬೇಕಾದ ಸಂಕಲ್ಪಗಳನ್ನು ಪಟ್ಟಿ ಮಾಡಿದ್ದು, ಅವುಗಳಲ್ಲಿ ಪ್ರಸ್ತುತವಾದ ಕೆಳಗಿನ ಮೂರು ಅಂಶಗಳನ್ನು ಮಾನವ ಸಂಪನ್ಮೂಲ ಕ್ಷೇತ್ರದ ವೃತ್ತಿಪರರೆಲ್ಲರೂ ತಮ್ಮ ಬದುಕಿನ ಭಾಗವಾಗಿ ಅಳವಡಿಸಿಕೊಳ್ಳುವ ಪಣ ತೊಡಬೇಕಾಗಿದೆ.
1990ರಲ್ಲಿ ಮಾನವ ಸಂಪನ್ಮೂಲ ವೃತ್ತಿಗೆ ಲೇಖಕರು ಪಾದಾರ್ಪಣೆ ಮಾಡಿದಾಗಿನಿಂದ 2009ರಲ್ಲಿ ಸ್ವಯಿಚ್ಛೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಬಯಕೆಯಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ಗೆ ಸೇರಿದವರೆಗಿನ ಸುಮಾರು ಎರಡು ದಶಕಗಳ ಅವಧಿಯಲ್ಲಿ ಪ್ರಮುಖವಾಗಿ ಮೂರು ಪ್ರತಿಷ್ಠಿತ ಉತ್ಪಾದನಾ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯವೆಸಗುವ ಅವಕಾಶ ಲೇಖಕರದ್ದಾಗಿತ್ತು. ಈ ಮೂರೂ ಸಂಸ್ಥೆಗಳಲ್ಲಿ (ಅಜೀಂ ಪ್ರೇಮ್ ಜಿ ಫೌಂಡೇಶನ್ ಹೊರತುಪಡಿಸಿ ಲೇಖಕರು ಸುಮಾರು ಐದು ವರ್ಷ ಅಥವ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಸಂಸ್ಥೆಗಳು: ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ ಕ್ಷೇತ್ರದ ಬಹುರಾಷ್ಟ್ರೀಯ ಬಾಷ್ ಒಡೆತನದ ಮೈಕೊ ಹಾಗು ಭಾರತೀಯ ಉದ್ದಿಮೆದಾರ ಜವಳಿ ಸಂಸ್ಥೆ ಹಿಮತ್ ಸಿಂಗ್ಕ ಸೈಡೆ) ಕಾರ್ಮಿಕ ಸಂಘಗಳೊಂದಿಗಿನ ಒಡನಾಟ ಗಟ್ಟಿಯಾಗಿದ್ದುದಲ್ಲದೆ ವೃತ್ತಿಪರ ಕಾಳಜಿ, ಬದ್ಧತೆ ಮತ್ತು ಪರಿಪಕ್ವತೆಯಿಂದ ಒಂದೆಡೆ ಆಯಾ ಸಂಸ್ಥೆಯ ಪರವಾಗಿಯೂ ಮತ್ತೊಂದೆಡೆ ಕಾರ್ಮಿಕ (ಮತ್ತು ಉದ್ಯೋಗಿಗಳ) ವರ್ಗದ ಹಿತ ಕಾಯುವಲ್ಲಿಯೂ ಲೇಖಕರ ಹೊಣೆಗಾರಿಕೆ ಸಮತೋಲನದಿಂದ ಕೂಡಿತ್ತು. ಲೇಖಕರು ವೃತ್ತಿಧರ್ಮಕ್ಕೆ ನ್ಯಾಯ ಒದಗಿಸುವುದರೊಂದಿಗೆ ಒಟ್ಟಾರೆ ಜವಾಬ್ದಾರಿಗಳಿಗೆ ಸ್ವಲ್ಪವೂ ಚ್ಯುತಿಯಾಗದಂತೆ ವಿವೇಚನೆಯಿಂದಲೇ ಕನ್ನಡದ ಕೆಲಸವನ್ನು ಸಮನ್ವಯಗೊಳಿಸಿ ಪ್ರೀತಿ, ಅಭಿಮಾನಗಳಿಂದ ಪೂರೈಸಿದ ಸಂತೃಪ್ತಿಯ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ವೃತ್ತಿಬಾಂಧವರು ಕನ್ನಡ ಮಣ್ಣಿನ ಸಂಸ್ಕೃತಿ, ಭಾಷೆ, ಸೊಗಡನ್ನು ಆರೋಗ್ಯಕರವಾಗಿ ಪೋಷಿಸಬಹುದಾದ ಹಲವು ಸಾಧ್ಯತೆಗಳನ್ನು ಈ ಸಂದರ್ಭದಲ್ಲಿ ಗುರುತಿಸಲು ಪ್ರಯತ್ನಿಸಿದ್ದಾರೆ. ಈ ಸಾಧ್ಯತೆಗಳನ್ನು ಸೇವಾ ಕ್ಷೇತ್ರದ ಸಂಸ್ಥೆಗಳಲ್ಲಿಯೂ ಸೂಕ್ತವಾಗಿ ಅಳವಡಿಸಿಕೊಳ್ಳಬಹುದು. ಅಲ್ಲದೆ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರರೂ ಇದೇ ರೀತಿಯ ಪ್ರಯತ್ನಗಳನ್ನು ತಮ್ಮ ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ಮಾರ್ಪಡಿಸಿಕೊಳ್ಳಬಹುದು. 1. ಉದ್ಯೋಗ ಮತ್ತು ನೇಮಕಾತಿಯ ನೆಲೆ: ಎಲ್ಲ ಬಗೆಯ ಸಂಸ್ಥೆಗಳಲ್ಲಿ ಅರ್ಹ ಮತ್ತು ಸಮರ್ಥ ಮಾನವ ಸಂಪನ್ಮೂಲದ ಅಗತ್ಯವನ್ನು ಮನಗಂಡು, ಲಭ್ಯತೆಯ ಮೂಲವನ್ನು ಶೋಧಿಸಿ, ಸಂಸ್ಥೆಗೆ ಕರೆತಂದು, ವಿವಿಧ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯವೆಸಗಲು ಅವರನ್ನು ಸಜ್ಜುಗೊಳಿಸಿ, ದೀರ್ಘಾವಧಿ ಕಾಲ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಅವರು ಬದ್ಧರಾಗಿರುವಂತೆ ಅಭಿವೃದ್ಧಿಪಡಿಸುವ ಪ್ರಮುಖ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗದ್ದಾಗಿರುತ್ತದೆ. ಖಾಯಂ ಉದ್ಯೋಗಕ್ಕೆ ಅಥವ ಮೇಲ್ವಿಚಾರಕರು, ನಿರ್ವಾಹಕರು ಇಲ್ಲವೆ ಉನ್ನತ ಸ್ಥಾನಗಳಿಗೆ ನೇಮಿಸಿಕೊಳ್ಳುವಾಗಲಂತೂ ಹೆಚ್ಚಿನ ಕಾಳಜಿ ತೋರಬೇಕಾಗುತ್ತದೆ. ಸಂಸ್ಥೆಯ ಆಡಳಿತವರ್ಗಕ್ಕೆ ಒಪ್ಪಿಗೆಯಾಗುವ ಆಯ್ಕೆಯ ಮಾನದಂಡಗಳನ್ನು ರೂಪಿಸಿ ನಿಖರವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲೂ ಸಹ ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಲ್ಪವೂ ಚ್ಯುತಿ ಬರದಂತೆ ನೋಡಿಕೊಳ್ಳುತ್ತಲೇ, ಕಡೆಯ ಹಂತದವರೆಗೆ ಬಹುತೇಕ ಮಾನದಂಡಗಳಲ್ಲಿ ಇಬ್ಬರು ಅಭ್ಯರ್ಥಿಗಳು ಹೆಚ್ಚಿನ ಅಂತರವಿಲ್ಲದೆ ಸಮಾನ ಮಟ್ಟದಲ್ಲಿರುವರೆಂದು ನಿರ್ಣಯಿಸಲ್ಪಟ್ಟು, ಅವರಲ್ಲಿ ಒಬ್ಬರು ನಮ್ಮ ನೆಲ, ಸಂಸ್ಕೃತಿ, ಭಾಷೆ, ಜಾಯಮಾನಗಳನ್ನು ದೃಢವಾಗಿ ರೂಢಿಸಿಕೊಂಡಿದ್ದಲ್ಲಿ ಆಯ್ಕೆ ಸಮಿತಿಯ ಭಾಗವಾಗಿ ನಮ್ಮ ಒಲವನ್ನು ಯಾರ ಪರ ವ್ಯಕ್ತಪಡಿಸುತ್ತೇವೆ? ಆಯ್ಕೆ ಸಮಿತಿಯ ಇತರ ಸದಸ್ಯರಿಗೆ ನಾವು ನೀಡುವ ಸಲಹೆ ಮತ್ತು ಅಭಿಪ್ರಾಯ ಯಾವ ಬಗೆಯದಾಗಿರುತ್ತದೆ? ಈ ಒಲವು-ನಿಲುವುಗಳು, ಸಲಹೆ-ಅಭಿಪ್ರಾಯಗಳನ್ನು ನಮ್ಮ ವೃತ್ತಿಪರ ಆಶಯಗಳಿಗೆ ಪೂರಕವಾಗಿರುವಂತೆ ನೆಲೆಗೊಳಿಸಿಯೂ ಸಹ ಈ ನೆಲದ ಅಸ್ಮಿತೆಯನ್ನು ತನ್ನದಾಗಿಸಿಕೊಂಡಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳನ್ನು ನಾವು ಕೈಚೆಲ್ಲಬಾರದಲ್ಲವೆ? ಇತ್ತೀಚಿನ ದಿನಗಳಲ್ಲಿ ತೀವ್ರ ಸ್ಪರ್ಧಾತ್ಮಕ ಆರ್ಥಿಕ ಪರಿಸರದಲ್ಲಿ ಕಾರ್ಯಾಚರಣೆಯ ವೆಚ್ಚಗಳನ್ನು ಮಿತಿಗೊಳಿಸುವ ಕಾರ್ಯತಂತ್ರದ ಭಾಗವಾಗಿ ಬಹುತೇಕ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಗಳ ಸಂಖ್ಯೆಯನ್ನು ಕುಗ್ಗಿಸಿ, ತಾತ್ಕಾಲಿಕ ಅವಧಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಂಸ್ಥೆಯಿಂದ ನೇರವಾಗಿ ನೇಮಿಸಿಕೊಳ್ಳದೆ, ಗುತ್ತಿಗೆದಾರರ ಮೂಲಕವಾಗಲಿ, ಪ್ರಶಿಕ್ಷಣಾರ್ಥಿಗಳ ರೂಪದಲ್ಲಾಗಲಿ ಅನ್ಯ ನವೀನ ಮಾರ್ಗಗಳಲ್ಲಿ ನೇಮಿಸಿಕೊಳ್ಳುವ ವಿಧಾನಗಳಿಗೆ ಸಂಸ್ಥೆಗಳು ಮುಗಿಬೀಳುತ್ತಿವೆ. ಇಂಥ ಸಂದರ್ಭಗಳಲ್ಲೂ ಸ್ಥಳೀಯರಿಗೆ ವಿಫುಲ ಅವಕಾಶಗಳನ್ನು ನೀಡುವ ಮನೋಧೋರಣೆಯನ್ನು ಮಾನವ ಸಂಪನ್ಮೂಲ ಬಳಗ ಪ್ರದರ್ಶಿಸಬೇಕಾಗುತ್ತದೆ. ಸಂಸ್ಥೆಯ ಹಿತದೃಷ್ಟಿಯಿಂದ ಯಾವುದೇ ಆಯ್ಕೆ ನಿಯಮಗಳನ್ನು ಗಾಳಿಗೆ ತೂರದೆ, ವೈಯಕ್ತಿಕ ಲೋಭ, ರಿಷುವತ್ತುಗಳಿಗೆ ಬಲಿಯಾಗದೆ, ನೈತಿಕ ನಡೆ-ನುಡಿಗಳಿಂದಲೇ ಈ ಉದ್ದೇಶವನ್ನು ಸಾಧಿಸಬಹುದೆಂದು ಇಪ್ಪತೆಂಟು ವರ್ಷಗಳ ಸುಧೀರ್ಘ ಸಾಂಸ್ಥಿಕ ಅನುಭವದಿಂದ ಲೇಖಕರು ಮನಗಂಡಿದ್ದಾರೆ. 2. ಮಾನವ ಸಂಪನ್ಮೂಲ ಅಭಿವೃದ್ಧಿಯ ಧಾತು: ಅರ್ಹ ಅಭ್ಯರ್ಥಿಗಳನ್ನು ಸಂಸ್ಥೆಗೆ ಕರೆತಂದ ಮೇಲೆ ಅವರನ್ನು ಸಂಸ್ಥೆಯ ಆಶಯ, ಸಂಬಂಧಪಟ್ಟ ವಿಭಾಗದ ಅಗತ್ಯತೆಗೆ ತಕ್ಕಂತೆ ರೂಪಿಸುವ, ಅಪೇಕ್ಷಿತ ಮೌಲ್ಯಗಳು, ಗುಣ - ಕೌಶಲಗಳನ್ನು ಅವರಲ್ಲಿ ಬೆಳೆಸುವ ಜವಾಬ್ದಾರಿಯೂ ಮಾನವ ಸಂಪನ್ಮೂಲ ವಿಭಾಗದ್ದಾಗಿದೆ. ಸಂಸ್ಥೆಯ ದೀರ್ಘಾವಧಿ ಗುರಿ, ವಿವಿಧ ವಿಭಾಗಗಳ ಪಾತ್ರ ಮತ್ತು ಸಹ-ಸಂಬಂಧ, ಉದ್ಯೋಗಿಗಳ ಸಾಮರ್ಥ್ಯಗಳು ಮತ್ತು ಮುಂಬರುವ ದಿನಗಳ ನಿರೀಕ್ಷೆಗಳನ್ನು ವಿಶ್ಲೇಷಿಸಿ, ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಾದ ತರಬೇತಿ ಮತ್ತು ಅಭಿವೃದ್ಧಿ ಯೋಜನೆಯನ್ನು ಇತರ ವಿಭಾಗಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಬೇಕಾಗುತ್ತದೆ. ಹೊಸ ಬದಲಾವಣೆಗಳಿಗೆ ಸಂಸ್ಥೆಯ ಉದ್ಯೋಗಿಗಳು ಧನಾತ್ಮಕವಾಗಿ ಚುರುಕಿನಿಂದ ಸ್ಪಂದಿಸಿ ಅವರನ್ನು ಸದಾ ಸಜ್ಜಾಗಿರುವಂತೆ ರೂಪಿಸಲು ಈ ಅಭಿವೃದ್ಧಿ ಯೋಜನೆಗಳನ್ನು ಆಗಿಂದಾಗ್ಗೆ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಈ ಯೋಜನೆಯ ಪರಿಕಲ್ಪನೆಯ ಹಂತದಲ್ಲಿ ಮೊದಲು ಆಂತರಿಕವಾಗಿ ಸಂಸ್ಥೆಯೊಳಗೆ ಇರುವ ಸಂಪನ್ಮೂಲಗಳು, ನಂತರ ಬಾಹ್ಯ ಮೂಲದ ಸಂಪನ್ಮೂಲ ಸಂಸ್ಥೆಗಳು / ವ್ಯಕ್ತಿಗಳ ಪಟ್ಟಿ ತಯಾರಿಸಿ, ತರಬೇತಿ ಮತ್ತು ಅಭಿವೃದ್ಧಿ ಯೋಜನೆಯ ರೂಪುರೇಷೆಯ ಬಗ್ಗೆ ಒಮ್ಮತಕ್ಕೆ ಬರಬೇಕಾಗುತ್ತದೆ. ಈ ಹಂತದಲ್ಲೂ ಈಗಾಗಲೇ ಈ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿರುವ, ದಕ್ಷ ಸ್ಥಳೀಯ ಸಂಪನ್ಮೂಲ ಸಂಸ್ಥೆ / ವ್ಯಕ್ತಿಗಳಿಗೆ ಆದ್ಯತೆಯ ಮೇರೆಗೆ ಜವಾಬ್ದಾರಿ ವಹಿಸುವ ಅವಕಾಶಗಳು ಮಾನವ ಸಂಪನ್ಮೂಲ ವೃತ್ತಿಪರರಿಗೆ ಇರುತ್ತವೆ. ಉದ್ಯೋಗಿಗಳ ದೃಷ್ಟಿಕೋನ, ಮನೋಭಾವವನ್ನು ಧನಾತ್ಮಕವಾಗಿ ರೂಪಿಸುವ ಕಾರ್ಯಕ್ರಮಗಳನ್ನು ಯೋಜಿಸುವಾಗಲಂತೂ ಉದ್ಯೋಗಿಗಳ ಜೀವನಕ್ಕೆ ಹತ್ತಿರವಾದ ಸಂದರ್ಭಗಳು, ಬದುಕಿನ ವಾಸ್ತವಗಳನ್ನು ಅಳವಡಿಸಿ ಅವರಿಗೆ ಮನದಟ್ಟಾಗುವಂತೆ ಅವರ ಭಾಷೆಯಲ್ಲೇ ಒದಗಿಸಿದಾಗ ಅವರು ನಿಸ್ಸಂಶಯವಾಗಿ ಉದ್ದೇಶಿತ ಸಂದೇಶವನ್ನು ಹೃದ್ಯವಾಗಿ ಸ್ವೀಕರಿಸುತ್ತಾರೆ. ಈ ಮುಖೇನ ನಾವು ಅವರಲ್ಲಿ ಕಾಣಬಯಸುವ ಮೌಲ್ಯಗಳನ್ನು ಅವರು ಸಹಜವಾಗಿ ರೂಢಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತದೆ. 3. ಉದ್ಯೋಗಿಗಳ ಬೌದ್ಧಿಕ ವಿಕಸನದ ಸೆಲೆ: ತಾವು ಕಾರ್ಯ ನಿರ್ವಹಿಸಿದ ಬಾಷ್ ಸಂಸ್ಥೆಯ ನಾಗನಾಥಪುರ ಘಟಕದಲ್ಲಿ ಉದ್ಯೋಗಿಗಳ ಜ್ಞಾನಾರ್ಜನೆಯನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಅವಕಾಶ ಎರಡು ದಶಕಗಳ ಹಿಂದೆಯೇ ಲೇಖಕರಿಗೆ ಒದಗಿ ಬಂತು. ಅಲ್ಲಿನ ಕನ್ನಡ ಬಳಗದ ಸಕ್ರೀಯ ಸದಸ್ಯರೊಂದಿಗೆ ಹೊಸ ಗ್ರಂಥಾಲಯ ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸಿ, ಆಡಳಿತ ವರ್ಗದ ಅನುಮತಿ ಪಡೆದು ಹಂತಹಂತವಾಗಿ ಜಾರಿಗೊಳಿಸಿದರು. ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆಗಳಾದ ಗೀತಾ ಬುಕ್ ಹೌಸ್, ಸಪ್ನ ಬುಕ್ ಹೌಸ್ ಮುಂತಾದವುಗಳಿಗೆ ಕನ್ನಡ ಬಳಗದವರೊಂದಿಗೆ ಕೆಲಸದ ಅವಧಿಯ ನಂತರ ಭೇಟಿಕೊಟ್ಟು, ಸಂಸ್ಥೆ ಅನುಮೋದಿಸಿದ ಹಣಕಾಸಿನ ಮಿತಿಯೊಳಗೆ ಸದಭಿರುಚಿಯ ಸಾಹಿತ್ಯಿಕ, ಶೈಕ್ಷಣಿಕ ನೆಲೆಯ ಕೃತಿಗಳನ್ನು, ಜನಪ್ರಿಯ ನಿಯತಕಾಲಿಕೆಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸುವ ಪದ್ಧತಿಯನ್ನು ರೂಪಿಸಿದ್ದು ಲೇಖಕರಿಗೆ ಖುಷಿ ತಂದ ಸಂಗತಿಯಾಗಿತ್ತು. ಈ ಆಯ್ಕೆಗಳಿಗೆ ಬೆಂಬಲವಾಗಿ ನಿಂತ ಕನ್ನಡ ಬಳಗದ ಸ್ನೇಹಿತರ ಪಾತ್ರವನ್ನು ಇಲ್ಲಿ ಸಂತೋಷದಿಂದ ನೆನೆಯಲೇಬೇಕು. ಈ ರೀತಿಯ ಪ್ರಯತ್ನದ ಭಾಗವಾಗಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಯನ್ನು ಗಮನಿಸಿ ಆಡಿಯೊ, ವಿಡಿಯೊ ಮುದ್ರಿಕೆಗಳು ಮತ್ತು ಡಿಜಿಟಲ್ ಸಂಗ್ರಹಗಳ ಮೂಲಕ ಉದ್ಯೋಗಿಗಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬಹುದು. ಉದ್ಯೋಗಿಗಳ ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಸಂಸ್ಥೆ ಮತ್ತು ಉದ್ಯೋಗಿಗಳ ಸಂವಹನದ ಕೊಂಡಿಯಾಗಿ ಆಂತರಿಕ ಪತ್ರಿಕೆಯನ್ನು ನಿಯತವಾಗಿ ಮಾಸಿಕ ಅಥವ ತ್ರೈಮಾಸಿಕವಾಗಿ ವಿನ್ಯಾಸಗೊಳಿಸಿ ಹೊರತಂದು ಸಂಸ್ಥೆಯ ವಹಿವಾಟು, ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ಹಂಚಿಕೊಳ್ಳುವುದು, ಹಿರಿಯ ಅಧಿಕಾರಿಗಳೊಂದಿಗೆ ಸಂದರ್ಶನ, ವಿಶೇಷ ಯೋಜನೆಗಳ ಬಗ್ಗೆ ವಿಶ್ಲೇಷಣೆ, ಉದ್ಯೋಗಿಗಳ ವಿಶಿಷ್ಟ ಕೊಡುಗೆ ಮತ್ತು ಸಾಧನೆಯ ಪ್ರಸ್ತುತಿ ಹಾಗು ಅವರ ವಿವಾಹ ಮತ್ತಿತರ ವೈಯಕ್ತಿಕ ಆಚರಣೆಗೆಗಳ ಸಂದರ್ಭದಲ್ಲಿ ಶುಭ ಕೋರುವುದು, ಉದ್ಯೋಗಿಗಳ ಸುಪ್ತ ಪ್ರತಿಭೆಗಳನ್ನು ಕವನ, ಕಥೆ, ಲೇಖನ. ಹರಟೆ, ಪುಸ್ತಕ ವಿಮರ್ಶೆ ಮುಂತಾದ ರೀತಿಗಳಲ್ಲಿ ಅನಾವರಣಗೊಳಿಸುವುದು ಹೀಗೆ ಸಂಸ್ಥೆಯಲ್ಲಿ ಎಲ್ಲರನ್ನೊಳಗೊಂಡ ಪರಸ್ಪರ ಆರೋಗ್ಯಕರ ಮುಖಾಮುಖಿಗೆ ವೇದಿಕೆ ನಿಮರ್ಿಸಬಹುದು. ಹಿಮತ್ ಸಿಂಗ್ಕ ಸಂಸ್ಥೆಯಲ್ಲಿ ಅಲ್ಲಿನ ಉತ್ಪನ್ನದ ಸ್ವರೂಪವನ್ನು ಬಿಂಬಿಸುವ ರೇಷ್ಮೆವಾಣಿ ಎಂಬ ತ್ರೈಮಾಸಿಕ ಕನ್ನಡ ಪತ್ರಿಕೆಯನ್ನು ರೂಪಿಸಿ ಅದರ ಸಂಪಾದಕತ್ವವನ್ನು ಹಲವು ವರ್ಷಗಳ ಕಾಲ ವಹಿಸಿದ ಸಂತೋಷದಾಯಕ ಅನುಭವ ಲೇಖಕರದ್ದಾಗಿತ್ತು. ಈ ಪ್ರಕ್ರಿಯೆಯಲ್ಲಿ ಆಡಳಿತವರ್ಗದ ವಿಶ್ವಾಸವನ್ನು ಗಳಿಸಿ ಇದನ್ನು ಲೇಖಕರು ನಡೆಸಿಕೊಂಡು ಹೋದರೆಂದು ಇಲ್ಲಿ ಒತ್ತಿ ಹೇಳಬೇಕಾಗಿಲ್ಲ. ಆದರೆ ಇಲ್ಲಿ ಅಪೇಕ್ಷಣೀಯವಾದುದೇನೆಂದರೆ ಸಂಸ್ಥೆಯ ನಾಡಿ-ಮಿಡಿತಗಳನ್ನು, ಜನರ ಒಳನೋಟಗಳನ್ನರಿತ ಮಾನವ ಸಂಪನ್ಮೂಲ ವಿಭಾಗದ ವೃತ್ತಿಪರರು ಸ್ವಯಂ ತಾವೇ ವಿಸ್ತೃತ ಸಾಹಿತ್ಯಿಕ, ಶೈಕ್ಷಣಿಕ ಅಭಿರುಚಿಯನ್ನು ಬೆಳೆಸಿಕೊಂಡು ಪತ್ರಿಕೆಯ ವಿನ್ಯಾಸದ ಪರಿಕಲ್ಪನೆಯಲ್ಲಿ, ಆಸಕ್ತಿದಾಯಕ ಲೇಖನಗಳು ಮೂಡಿಬರುವಲ್ಲಿ ಹೆಚ್ಚಿನ ಆಸ್ಥೆ ವಹಿಸಬೇಕಾಗಿರುವುದು. ಅಲ್ಲದೆ ಸಹೋದ್ಯೋಗಿಗಳಲ್ಲಿ ಹುದುಗಿರುವ ವಿಶಿಷ್ಟ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಉದ್ಯೋಗಿಗಳ ಬೌದ್ಧಿಕ ಮತ್ತು ವೃತ್ತಿಪರ ಬೆಳವಣಿಗೆಯ ಒತ್ತಾಸೆಯನ್ನು ಸಾಕಾರಗೊಳಿಸಿಕೊಳ್ಳಲು ಅವರು ಉನ್ನತ ವ್ಯಾಸಂಗವನ್ನು ಮುಂದುವರೆಸಲು ಬಯಸಿದಾಗ ಸಂಸ್ಥೆಯ ಕೆಲಸಗಳಿಗೆ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಿ ಅವರಿಗೆ ಬೇಕಾಗುವ ಆಕರ ಗ್ರಂಥಗಳನ್ನು, ಇತರ ಪೂರಕ ಸಾಮಗ್ರಿಗಳನ್ನು ಒದಗಿಸಲಾದರೆ ಅಂತಹ ಆಸಕ್ತ ಉದ್ಯೋಗಿಗಳ ಬೆಳವಣಿಗೆಗೆ ಸಹಾಯಕವಾದೀತು. ಹಿಮತ್ ಸಿಂಗ್ಕದ ಹಾಸನ ಘಟಕದಲ್ಲಿ ಲರ್ನ್ ವೈಲ್ ಅರ್ನಿಂಗ್ ಕಾರ್ಯಕ್ರಮದಡಿ ಪದವಿಪೂರ್ವ ಹಂತದಲ್ಲೇ ಓದನ್ನು ನಿಲ್ಲಿಸಿದ್ದ, ಅದರಲ್ಲೂ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಮಹಿಳಾ ಉದ್ಯೋಗಿಗಳಿಗೆ ಪದವಿ ವ್ಯಾಸಂಗ ಮುಂದುವರೆಸಲು KSOU ಜೊತೆ ವ್ಯವಹರಿಸಿ ಅವಕಾಶ ಕಲ್ಪಿಸಿದ್ದೇ ಅಲ್ಲದೆ ಕೆಲಸದ ಅವಧಿ ನಂತರ ಅವರು ತಂಗಿದ್ದ ವಸತಿನಿಲಯಗಳಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಲಾಯ್ತು. ಬಹುತೇಕ ಮಹಿಳೆಯರು ಕನ್ನಡ ಮಾಧ್ಯಮದಲ್ಲೇ ತಮ್ಮ ಶಿಕ್ಷಣವನ್ನು ಪೂರೈಸಿದ ಯಶಸ್ಸನ್ನು ಸಾಧಿಸಿದ್ದು ಮಹತ್ವದ ವಿಷಯ. ಆ ಅವಕಾಶಗಳಿಂದಾಗಿ ನೂರಾರು ಉದ್ಯೋಗಿಗಳು ಪದವಿ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಂಸ್ಥೆ ನೆರವಾದ ಬಗ್ಗೆ ಈಗಲೂ ಹೆಮ್ಮೆಯಿದೆ. 4. ಉದ್ಯೋಗಿಗಳೊಂದಿಗಿನ ಸಂವಹನ ಕೊಂಡಿ: ಆಡಳಿತ ವರ್ಗದ ಪರವಾಗಿ ಆಗಿಂದಾಗ್ಗೆ ಸಂಸ್ಥೆಯ ವಹಿವಾಟು, ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸ್ಪಧರ್ೆಯ ತೀವ್ರತೆ, ನೀತಿ ನಿಯಮಗಳ ಬಗ್ಗೆ ಉದ್ಯೋಗಿಗಳಿಗೆ ಕಳುಹಿಸುವ ಮಿಂಚಂಚೆ, ಸೂಚನೆ, ಕರಪತ್ರಗಳಂಥ ಮಾಧ್ಯಮಗಳ ಮೂಲಕ ಮಾಹಿತಿ ಒದಗಿಸುವ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗದ್ದಾಗಿರುತ್ತದೆ. ಈ ಎಲ್ಲ ಬಗೆಯ ಓಲೆಗಳು, ಅಂಕಿ-ಅಂಶಗಳು, ಪ್ರಕಟನೆಗಳು, ಶುಭಾಶಯಗಳು, ಸೂಚನಾ ಫಲಕಗಳಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಪ್ರಾಂತೀಯ ಭಾಷೆಯಲ್ಲೇ ಮುಟ್ಟಿಸಿದಲ್ಲಿ ಉದ್ಯೋಗಿಗಳು ಸುಲಭವಾಗಿ ಗ್ರಹಿಸುತ್ತಾರೆ. ಸಂಸ್ಥೆ ತಮ್ಮೊಂದಿಗೆ ಆಡುನುಡಿಯಲ್ಲೇ ಸಂವಹಿಸುತ್ತಿದೆಯೆಂದು ಭಾವನಾತ್ಮಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಮಿಕ ಸಂಘಗಳೊಂದಿಗೆ ನಡೆಸುವ ಪತ್ರ ವ್ಯವಹಾರ, ಪರಸ್ಪರ ಸಭೆಗಳಲ್ಲಿ ನಡೆಸುವ ಚರ್ಚೆಗಳ ನಡಾವಳಿಗಳು ಸಹ ಜನರ ಭಾಷೆಯಲ್ಲಿರುವುದು ಕೊಡು-ಕೊಳ್ಳುವಿಕೆಯ ಪ್ರಕ್ರಿಯೆಗೆ ಆತ್ಮೀಯ ವಾತಾವರಣ ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ. ಹೊಸ ವರ್ಷದಂದು ಸಂಸ್ಥೆಯ ವತಿಯಿಂದ ಉದ್ಯೋಗಿಗಳಿಗೆ ನೀಡುವ ಸಂದೇಶವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟು, ಅದನ್ನು ಉದ್ಯೋಗಿಗಳು ಅರ್ಥೈಸಿಕೊಂಡು ಸಂತೋಷಿಸಿದ ಸಂದರ್ಭಗಳಿಂದಾಗಿಯೂ ಲೇಖಕರು ಕೆಲಸ ಮಾಡಿದ ಸಂಸ್ಥೆಗಳಲ್ಲಿ ಈ ಬಗೆಯ ನಿರಂತರ ಸಂವಹನ ಕ್ರಿಯೆ ಸಂಬಂಧಗಳನ್ನು ವೃದ್ಧಿಸಿದೆಯಲ್ಲದೆ ಉಭಯ ಪಕ್ಷಗಳ ನಡುವೆ ಇರಬಹುದಾದ ಕಂದಕಗಳನ್ನು ಮೀರಿ ಸಮಾನ ಗುರಿಯೆಡೆಗೆ ಮುನ್ನಡೆಯುವಲ್ಲಿ ನೆರವಾಗಿದೆ. ಇನ್ನು ಕಾನೂನು, ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಶಿಸ್ತಿನ ಉಲ್ಲಂಘನೆಗೆ ಸಂಬಂಧಪಟ್ಟಂತೆ ಉದ್ಯೋಗಿಗಳನ್ನು ಶಿಸ್ತಿನ ಕ್ರಮಕ್ಕೆ ಒಳಪಡಿಸಿದಾಗ ಅವರಿಗೆ ನೀಡುವ ಆರೋಪ ಪಟ್ಟಿ, ವಿಚಾರಣೆಯ ನಡಾವಳಿಗಳು, ಸಾಕ್ಷಿಗಳ ಹೇಳಿಕೆಗಳ ದಾಖಲಾತಿ, ವಿಚಾರಣಾಧಿಕಾರಿಯ ಅಂತಿಮ ವರದಿ ಮತ್ತು ಆಡಳಿತ ವರ್ಗದ ಆದೇಶ ಇವೆಲ್ಲವೂ ಆರೋಪಕ್ಕೊಳಗಾದ ಉದ್ಯೋಗಿಗಳ ಭಾಷೆಯಲ್ಲೇ ದಾಖಲಾಗುವುದು ಕಾನೂನಿನ ಆಶಯವೂ ಆಗಿರುವುದರಿಂದ ಹಾಗೆ ಮಾಡುವುದು ಸಂಸ್ಥೆಯ ಹಿತದೃಷ್ಟಿಯಿಂದಲೂ ವಿಹಿತ. 5. ಸಮಾಜೋ-ಸಾಂಸ್ಕೃತಿಕ ಸಮ್ಮಿಳಿತದ ಎಳೆ:
ಎಲ್ಲ ಸಂಸ್ಥೆಗಳಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಉದ್ಯೋಗಿಗಳು ಮತ್ತು ಅವರ ಕುಟುಂಬವರ್ಗದೊಂದಿಗೆ ಸಾಮೂಹಿಕವಾಗಿ ಕೂಡಿ ಸಂಭ್ರಮಿಸುವ ಸಂದರ್ಭಗಳು ಇದ್ದೇ ಇರುತ್ತವೆ. ಬೃಹತ್ ಕುಟುಂಬದ ಈ ಒಗ್ಗೂಡುವಿಕೆಯ ಕ್ಷಣಗಳು ಸಾಂಸ್ಕೃತಿಕ ಚಟುವಟಿಕೆಗಳಿಗೆ, ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ಹಾಡು, ಕುಣಿತ, ನಾಟಕ ಮುಂತಾದ ವಿನೋದಾವಳಿಗಳಿಗೆ ವೇದಿಕೆಯೊದಗಿಸುತ್ತವೆ. ಅಲ್ಲದೆ ಪ್ರಸಿದ್ಧ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳನ್ನು ಆಯೋಜಿಸುವ ಅವಕಾಶಗಳಿರುತ್ತವೆ. ಉದ್ಯೋಗಿಗಳ ಮತ್ತು ಕುಟುಂಬವರ್ಗದವರ ಪ್ರತಿಭೆಯಾಗಲಿ ಇಲ್ಲವೆ ನಾಡಿನ ಇತರ ತಂಡಗಳ ಪ್ರತಿಭೆ ಸಾಕಾರಗೊಳ್ಳಲಿ, ಕಾರ್ಯಕ್ರಮದ ಆಯೋಜನೆಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಸದಸ್ಯರು ತೊಡಗಿಕೊಂಡು, ಸಂಬಂಧಿಸಿದ ಸಮಿತಿಯ ಸದಸ್ಯರು ಮಾಡುವ ಆಯ್ಕೆಗಳಲ್ಲಿ ಸ್ಥಳೀಯ ನಾಡು, ನುಡಿ, ಸಾಂಸ್ಕೃತಿಕ ಕಲೆಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಅವಕಾಶಗಳು ಸಿಗುವಂತೆ ಧನಾತ್ಮಕವಾಗಿ ಪ್ರಭಾವಿಸಬಹುದಾಗಿದೆ. ಆಂತರಿಕ ಪ್ರತಿಭೆಗಳಿಗೇ ಒತ್ತುಕೊಟ್ಟು ಉದ್ಯೋಗಿಗಳನ್ನು ತಯಾರುಗೊಳಿಸಿ ಸಂಗೀತ, ನಾಟಕ, ನೃತ್ಯ, ಕಲಾ ಪ್ರದರ್ಶನಗಳನ್ನು ಏರ್ಪಡಿಸಿದರಂತೂ ಬಹು ಸಂಖ್ಯೆಯಲ್ಲಿ ಉದ್ಯೋಗಿಗಳು ಮತ್ತು ಅವರ ಕುಟುಂಬವರ್ಗ ಪಾಲ್ಗೊಳ್ಳುವರು. ಮುಖ್ಯ ಸಮಾರಂಭಕ್ಕೆ ಮುನ್ನ ಕೆಲವು ದಿನಗಳ ಕಾಲ ತಾಲೀಮಿನಲ್ಲಿ ಮಗ್ನರಾಗಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ತೊಡಗಿದ ಉದ್ಯೋಗಿಗಳು ಮತ್ತು ಸಂಸ್ಥೆಯ ನಡುವೆ ಸುಮಧುರ ಬಾಂಧವ್ಯ ಏರ್ಪಟ್ಟು, ಅವರು ಸೇವೆಯಲ್ಲಿರುವವರೆಗೂ ಇಂಥ ಅವಕಾಶಗಳಿಗೆ ಆಭಾರಿಯಾಗಿರುತ್ತಾರೆ. ಈ ಪ್ರಕ್ರಿಯೆಗಳಿಗೆ ವಿನಿಯೋಗಿಸಬೇಕಾದ ಸಂಸ್ಥೆಯ ಸಮಯ ಮತ್ತು ವೆಚ್ಛ ದೀರ್ಘಾವಧಿಯಲ್ಲಿ ಅದು ಉಂಟುಮಾಡುವ ಧನಾತ್ಮಕ ಪ್ರತಿಸ್ಪಂದನೆಯ ಭಾವಕ್ಕೆ ಹೋಲಿಸಿದರೆ ಗೌಣವಾಗಿರುತ್ತದೆ. ಹಿಮತ್ ಸಿಂಗ್ಕದಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುತ್ತಿದ್ದ ರಾಜ್ಯೋತ್ಸವದ ರಸ ಸಂಜೆಗಳನ್ನು ಇದೇ ಕಾರಣದಿಂದಾಗಿ ಎಲ್ಲರೂ ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದರು. ಇತರ ಸಹೋದ್ಯೋಗಿಗಳ ಕುಟುಂಬ ವರ್ಗಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಆ ಸಂತೋಷದ ಘಳಿಗೆಗಳು ಅವರಿಗೆ ಅಚ್ಚಳಿಯದ ನೆನಪುಗಳಾಗುತ್ತಿದ್ದವು. ಸಂಸ್ಥೆಯ ಆಡಳಿತವರ್ಗ ಮತ್ತು ಅವರ ಕುಟುಂಬದ ಸದಸ್ಯರು ಮುಕ್ತವಾಗಿ ಈ ಸಮಾರಂಭಗಳಲ್ಲಿ ಪಾಲ್ಗೊಂಡು ಉದ್ಯೋಗಿಗಳು ಮತ್ತು ಅವರ ಕುಟುಂಬಗಳೊಂದಿಗೆ ಲಘು ಉಪಹಾರವನ್ನು ಸೇವಿಸಿ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಆ ವಾತಾವರಣ ಸಾಮಾಜಿಕ ಏಕತೆಗೆ ಭಾಷ್ಯ ಬರೆದಂತಿರುತ್ತಿತ್ತು! ಇಂಥ ಸಂಭ್ರಮಾಚರಣೆಗಳು ನಿಜಕ್ಕೂ ವಿಭಿನ್ನ ಮನಸ್ಸುಗಳು ಒಂದಾಗಲು ಅತ್ಯಂತ ಅವಶ್ಯಕವಾಗಿದ್ದು ಲಿಂಗ, ಭಾಷೆ, ಧರ್ಮ, ಜಾತಿ, ಪಂಗಡ, ಮೇಲು-ಕೀಳು, ಒಲವು-ನಿಲುವು ಮುಂತಾದ ಎಲ್ಲೆಗಳನ್ನು ಮೀರಿ ಬಹುತ್ವದ ಒಂದು ವಿಶಿಷ್ಟ ಸಂಕೇತವಾಗಿ ಹೊರಹೊಮ್ಮುತ್ತಿದ್ದವು; ಅಲ್ಲದೆ ಎಲ್ಲರೂ ತಮ್ಮ ಪರಿಮಿತಿಗಳನ್ನು ಮೀರಿ ಕೆಲವು ಕ್ಷಣಗಳಾದರೂ ಆ ಅದ್ಭುತ ತನ್ಮಯತೆಯ ಅನುಭೂತಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಇಂಥ ದೊಡ್ಡ ಸಮಾರಂಭಗಳಲ್ಲಿ ಸಾವಿರಾರು ಸಂಖ್ಯೆಯ ಜನರು ನೆರೆದಾಗ ಸಂಸ್ಥೆಯ ವತಿಯಿಂದ ಉದ್ಯೋಗಿಗಳು ಮತ್ತು ಅವರ ಕುಟುಂಬವರ್ಗದವರನ್ನು ಉದ್ದೇಶಿಸಿ ಸಂಸ್ಥೆಯ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಧನಾತ್ಮಕ ಸಂದೇಶಗಳನ್ನು ತಮ್ಮ ನುಡಿಗಳ ಮೂಲಕ ನೀಡುತ್ತಿದ್ದುದು ಒಂದು ವಾಡಿಕೆ. ಸ್ವಯಂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಿಗಂತೂ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಈ ವೇದಿಕೆ ಸುವರ್ಣಾವಕಾಶವನ್ನು ಒದಗಿಸುತ್ತದೆ. ಇಂಥ ಸಂದರ್ಭಗಳಲ್ಲಿ ಎಲ್ಲರ ಮನಮುಟ್ಟುವಂತೆ ಈ ಮಣ್ಣಿನ ಭಾಷೆಯಲ್ಲಿ ಸರಳವಾಗಿಯೂ ಆಕರ್ಷಕವಾಗಿಯೂ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳುವುದು ಅತ್ಯಂತ ಮಹತ್ವದ್ದು. ಇದಲ್ಲದೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಇಲ್ಲವೆ ಕಾರ್ಯಾಧ್ಯಕ್ಷರ ಭಾಷಣಗಳು ಇಂಗ್ಲೀಷ್ ಅಥವಾ ಹಿಂದಿಯಲ್ಲಿದ್ದಲ್ಲಿ ಅದನ್ನು ತಕ್ಷಣ ಜನರ ಆಡುನುಡಿಯಲ್ಲಿ ಅನುವಾದಿಸಿ (ಕರ್ನಾಟಕದಲ್ಲಿ ಅನುವಾದಿತ ಭಾಷೆ ಕನ್ನಡವೆಂಬುದು ಸರ್ವವಿಧಿತ) ಮನಮುಟ್ಟುವಂತೆ ತಿಳಿಸುವುದು ಅಗತ್ಯವಾಗುತ್ತದೆ. ಸಂಸ್ಥೆಯ ಮುಖ್ಯಸ್ಥರ ನುಡಿಗಳನ್ನು ನಾನು ಬಾಷ್ ಮತ್ತು ಹಿಮತ್ ಸಿಂಗ್ಕ ಸಂಸ್ಥೆಗಳಲ್ಲಿ ವೇದಿಕೆಯಲ್ಲೇ ಅನುವಾದಿಸಿ ಪ್ರಚುರಪಡಿಸುತ್ತಿದ್ದುದು ಉದ್ಯೋಗಿಗಳಿಗೆ ಆಪ್ಯಾಯಮಾನವಾಗುತ್ತಿತ್ತು. ಮೇಲಾಗಿ ಸಂಸ್ಥೆಯ ಏಳು-ಬೀಳುಗಳೊಂದಿಗೆ ಅವರು ಇನ್ನೂ ಆಳವಾಗಿ ಗುರುತಿಸಿಕೊಳ್ಳಲು ಈ ಸಂವಹನ ಕ್ರಿಯೆ ನೆರವಾಗುತ್ತಿತ್ತು. 6. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಬೇರು: ಕಳೆದ ಕೆಲವು ವರ್ಷಗಳಿಂದೀಚೆಗೆ ಎಲ್ಲ ಬಗೆಯ ಸಂಸ್ಥೆಗಳು ತಾವು ನೆಲೆಸಿರುವ ಪ್ರದೇಶದ ನೆರೆಹೊರೆಯಲ್ಲಿ ವಾಸಿಸುವ ಸಮುದಾಯಗಳೊಂದಿಗೆ ಗುರುತಿಸಿಕೊಳ್ಳಲು ಯಾವುದಾದರೂ ಒಂದೆರಡು ಸಮಾಜಮುಖಿ ಕೊಡುಗೆಗಳನ್ನು ನೀಡುವ ಪರಿಪಾಠ ಹೆಚ್ಚಾಗಿದೆ. ಈ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರ್ಕಾರ ಸಂಸ್ಥೆಯ ಲಾಭಾಂಶದಲ್ಲಿ ಶೇ.2 ರಷ್ಟು ಮೊತ್ತವನ್ನು ಸಾಮಾಜಿಕ ಹೊಣೆಗಾರಿಕೆಯ ಧ್ಯೋತಕವಾಗಿ ವೆಚ್ಛ ಮಾಡಬೇಕೆಂದು ಕಾನೂನಾತ್ಮಕವಾಗಿ ನಿಯಮ ರೂಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅನೇಕ ಸಂಸ್ಥೆಗಳು ಈ ಸಲುವಾಗಿಯೇ ಸಾಮಾಜಿಕವಾಗಿ ಜನಪರ ಉದ್ದೇಶಗಳಿಗಾಗಿ ಕಾಣಿಕೆ ಸಲ್ಲಿಸಬೇಕೆಂಬ ಬಯಕೆಯಿಂದ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿಕೊಂಡಿವೆ. ಈ ನಿಯಮಗಳನ್ನು ದಾಟಿದ ಹಲವು ದೊಡ್ಡ ಸಂಸ್ಥೆಗಳು ಹೆಚ್ಚಿನ ಬದ್ಧತೆಯನ್ನು ತೋರಿ ತಮ್ಮದೇ ಆದ ಪ್ರತಿಷ್ಠಾನಗಳ ಮೂಲಕ ವ್ಯವಸ್ಥಿತವಾಗಿ ಅದ್ಭುತ ಕೊಡುಗೆ ನೀಡುತ್ತಿವೆ. ಇನ್ನುಳಿದ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗವೇ ಈ ಜವಾಬ್ದಾರಿಯನ್ನೂ ನಿರ್ವಹಿಸಬೇಕಾದ ಅಗತ್ಯತೆಯಿದೆ. ಇಂಥ ಸನ್ನಿವೇಶಗಳಲ್ಲಿ ಸಂಸ್ಥೆಯ ಉದ್ಯೋಗಿಗಳು ಹಾಗು ಅವರ ಕುಟುಂಬವರ್ಗ, ನೆರೆಹೊರೆಯಲ್ಲಿ ವಾಸಿಸುವ ಸಮುದಾಯಗಳ ಹಿತದೃಷ್ಟಿಯಿಂದ ಪರಿಸರ ಕಾಳಜಿಯಿಂದ ಕೂಡಿದ, ಅವರ ಬದುಕಿನ ಸವಾಲುಗಳನ್ನರಿತು ಸ್ವಲ್ಪ ಮಟ್ಟಿಗಾದರೂ ಅವುಗಳಿಗೆ ಸ್ಪಂದಿಸುವ ಪರಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಉತ್ತರದಾಯಿತ್ವವಿದೆ. ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ಕೌಶಲಾಭಿವೃದ್ಧಿ, ವೃತ್ತಿ ಸಮಾಲೋಚನೆ, ಉದ್ಯೋಗ ನಿರ್ಮಾಣ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ, ಮೂಲ ಸೌಕರ್ಯ ಸುಧಾರಣೆ, ಹೀಗೆ ಹತ್ತು ಹಲವು ಅಭಿವೃದ್ಧಿ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಸಂಸ್ಥೆಯ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳನ್ನು ಯೋಜಿತ ರೀತಿಯಲ್ಲಿ ನಿಯೋಜಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿ ಬದಲಾವಣೆ ತರಬಹುದಾಗಿದೆ. ಈ ಮೂಲಕ ಸಂಸ್ಥೆ ತನ್ನ ಸಾಮುದಾಯಿಕ ಹೊಣೆಗಾರಿಕೆಯನ್ನು ಅರ್ಥಪೂರ್ಣವಾಗಿ ನಿರ್ವಹಿಸಿದಂತಾಗುತ್ತದೆ. ಅಲ್ಲದೆ ತನ್ನ ಸಾಮಾಜಿಕ ಬಂಡವಾಳವನ್ನು ದೀರ್ಘಕಾಲಿಕವಾಗಿ ಪೋಷಿಸಿದಂತಾಗುತ್ತದೆ. ಇಂಥ ಸಮಾಜಮುಖಿ ಕಾರ್ಯಗಳಲ್ಲಿ ಬಳಸುವ ಸಂವಹನ ಮಾಧ್ಯಮ, ಪ್ರಚಾರಾಂದೋಲನಗಳು, ಯೋಜನೆಯ ವಿನ್ಯಾಸ ಮತ್ತು ಅನುಷ್ಠಾನ ಪ್ರಕ್ರಿಯೆಯಲ್ಲಿ ಸ್ಥಳೀಯವಾಗಿ ಗುರುತಿಸಿಕೊಂಡಿರುವ ಉದ್ಯೋಗಿಗಳು, ಅಲ್ಲಿನ ಮುಖಂಡರು ಮತ್ತು ಸಂಬಂಧಿಸಿದ ಸರ್ಕಾರಿ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಯೋಗದಲ್ಲಿ ನಿರ್ವಹಿಸಿದಲ್ಲಿ ಸಂಸ್ಥೆ ಜನ ಸಮುದಾಯದ ಅವಿಭಾಜ್ಯ ಅಂಗವಾಗಿ ಮೆಚ್ಚುಗೆ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಜನರ ಜೀವನದ ಮೇಲೆ ಪರಿಣಾಮ ಬೀರುವ ಇಂಥ ಯೋಜನೆಗಳನ್ನು ರೂಪಿಸುವಾಗ ಅವರ ಭಾಷೆ, ಸಂಸ್ಕೃತಿ, ಹಿನ್ನೆಲೆಗಳನ್ನು ಗೌರವಿಸಿದಲ್ಲಿ ಸಂಸ್ಥೆಗೆ ಸಮುದಾಯದಿಂದ ದೊರೆಯುವ ಸಹಕಾರ ಇಮ್ಮಡಿಯಾಗುತ್ತದೆ. ಅಂತಿಮ ಮಾತು: ಕರ್ನಾಟಕದ ನೆಲ, ಜಲ, ಭಾಷೆ, ಸಂಸ್ಕೃತಿ, ಅಸ್ಮಿತೆಗಳನ್ನು ಉಳಿಸಿ ಬೆಳೆಸುವ ಪಾಲು ಇಲ್ಲಿ ಸ್ಥಾಪಿತಗೊಂಡಿರುವ ಸಂಸ್ಥೆಗಳದ್ದೂ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಂಸ್ಥಿಕ ನೆಲೆಯಲ್ಲಿ ಮಾನವ ಸಂಪನ್ಮೂಲ ವಿಭಾಗ ತನ್ನ ಉತ್ತರದಾಯಿತ್ವದ ಭಾಗವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸಾಧ್ಯತೆಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಸಂಸ್ಥೆಯ ಆಶಯಗಳು ಮತ್ತು ಸ್ಥಳೀಯ ಅಗತ್ಯತೆಗಳಿಗೆ ಪೂರಕವಾಗಿರುವ ಇಂಥ ಹಲವು ಇತರ ಸಾಮಾಜಿಕ ಪ್ರಯತ್ನಗಳನ್ನು ಗುರುತಿಸಿ, ಸಂಸ್ಥೆಯು ಅವುಗಳಲ್ಲಿ ತೊಡಗುವಂತೆ ಮಾನವ ಸಂಪನ್ಮೂಲ ವಿಭಾಗ ಪ್ರಭಾವಿಸಲು ಶಕ್ಯವಾಗಿದೆ. ನಮ್ಮ ನಾಡಿನ ಶ್ರೇಷ್ಠ ಚಿಂತಕ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ತಮ್ಮ ಲೇಖನವೊಂದರಲ್ಲಿ ಆಡಳಿತದಲ್ಲಿ ಕನ್ನಡವನ್ನು ಬಳಸಲೇಬೇಕಾದ ಅನಿವಾರ್ಯತೆಯ ಬಗ್ಗೆ ಹೀಗೆಂದು ಬೆಳಕು ಹರಿಸಿದ್ದಾರೆ. ಆಡಳಿತ, ಆರ್ಥಿಕ ವಹಿವಾಟು ಇತ್ಯಾದಿಗಳ ಜನಬಳಕೆಯನ್ನು ತಪ್ಪಿಸಿಬಿಟ್ಟರೆ ಸಾಕು, ಕನ್ನಡವನ್ನು ಕೊಲ್ಲುವುದಕ್ಕೆ ಬೇರೆ ಸಮರ್ಥ ವಿಧಾನ ಬೇಕಿಲ್ಲ. ಕನ್ನಡದಲ್ಲಿ ಎಂಥ ಮಹಾ ಸಾಹಿತಿಗಳಿದ್ದರೂ, ಕನ್ನಡಕ್ಕೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೂ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಷ್ಟು ವಿಜೃಂಭಣೆಯಿಂದ ನಾವು ಆಚರಿಸಿದರೂ, ಜನ ಬಳಸುವುದನ್ನು ನಿಲ್ಲಿಸುತ್ತಿದ್ದಂತೆಯೇ ಆ ಭಾಷೆಯ ಅವಸಾನ ಶುರುವಾಗುತ್ತದೆ. ಇದಕ್ಕೆ ಸಂಸ್ಕೃತದ ಜ್ವಲಂತ ಉದಾಹರಣೆ ನಮ್ಮ ಕಣ್ಣೆದುರೇ ಇದೆ (ಸೂಪರ್ ಪವರ್ ಆಗಲು ಕನ್ನಡವೇ ಗತಿ, ಪು.308-9, ಹೊಸ ವಿಚಾರಗಳು, ಪುಸ್ತಕ ಪ್ರಕಾಶನ, ಮೈಸೂರು, 2012). ತೇಜಸ್ವಿಯವರು ಮುಂದುವರೆದು, ಭವಿಷ್ಯದ ಜಾಗತಿಕ ಸ್ಪರ್ಧಾತ್ಮಕ ವ್ಯವಹಾರದಲ್ಲೂ ಕನ್ನಡವನ್ನು ಬಳಸದೆ ವಿಧಿಯಿಲ್ಲ ಎಂದು ದೂರದೃಷ್ಟಿಯಿಂದ ನುಡಿದಿದ್ದಾರೆ. ಹೆಚ್ಚು ಕಡಿಮೆ ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ಆಫ್ರಿಕ ಖಂಡ ಅಮೆರಿಕಕ್ಕೆ ಗುಲಾಮರನ್ನು ಒದಗಿಸಿದ ರೀತಿಯಲ್ಲೇ ಈಗ ಏಷ್ಯ, ಅದರಲ್ಲೂ ಭಾರತ ತಂತ್ರಜ್ಞರನ್ನು ಒದಗಿಸಲು ಸಿದ್ಧವಾಗಿದೆ. ದುರಂತವೆಂದರೆ ಇದನ್ನು ತಿರಸ್ಕರಿಸಿದರೆ ನಮ್ಮ ಯುವ ಜನರಿಗೆ ಬೇರೆ ದಿಕ್ಕು ತೋರಿಸುವ ಸ್ಥಿತಿಯಲ್ಲಿ ನಮ್ಮ ಸರ್ಕಾರಗಳು ಇಲ್ಲ. ಗುಲಾಮಗಿರಿಯೋ, ಊಳಿಗವೋ, ಜೀತವೋ, ಸಹಿಸಿಕೊಂಡು ನಾವು ಮುಂದುವರೆಯಬೇಕಾಗಿದೆ. ಈ ದಿಕ್ಕಿನಲ್ಲಿ ಚೀನಾ, ಮಲೇಷ್ಯಾ, ದಕ್ಷಿಣ ಕೋರಿಯಾ, ಬ್ರೆಜಿಲ್ ಮೊದಲಾದ ದೇಶಗಳು ದೂರದೃಷ್ಟಿಯಿಂದ ಲಿನೆಕ್ಸ್ ಆಪರೇಟಿಂಗ್ ಸಿಸ್ಟಂ ಮೇಲೆ ಕೆಲಸ ಮಾಡುವ ಸಂಪೂರ್ಣ ತಮ್ಮ ಭಾಷೆಯದೇ ಆದ ತಂತ್ರಾಂಶಗಳನ್ನು ಬಿಡುಗಡೆ ಮಾಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ನಾವು ನಿಜವಾಗಿಯೂ ಸೂಪರ್ ಪವರ್ ಆಗಬೇಕೆಂದಾದರೆ ಕನ್ನಡವನ್ನು ಆಶ್ರಯಿಸದೆ ಬೇರೆ ಗತಿಯಿಲ್ಲ. ಇದೆಲ್ಲವೂ ಈಗಿಂದೀಗಲೇ ಕಾರ್ಯಗತಗೊಳಿಸಲು ಕಷ್ಟಸಾಧ್ಯವಿರಬಹುದು. ಆದರೂ ಚೀನೀಯರಂತೆ ದೂರಗಾಮಿ ಯೋಜನೆಗಳನ್ನು ಈಗಲೇ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು. ತೇಜಸ್ವಿಯವರು ಹೇಳಿರುವಂತೆ ಎಲ್ಲವನ್ನೂ ಒಮ್ಮೆಲೇ ಸಾಧಿಸಲಾಗದು. ನಮ್ಮ ಸಂಸ್ಥೆಗಳಲ್ಲಿನ ಸಂದರ್ಭಗಳನ್ನರಿತು, ಕೈಲಾದ ಮಟ್ಟಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ನಾವು ಮುಂದಡಿಯಿಡಬೇಕು. ಈ ನಿಟ್ಟಿನಲ್ಲಿ ದಾರ್ಶನಿಕ, ಕವಿ ಡಿವಿಜಿ ಕಗ್ಗದಲ್ಲಿ (576, ಕಗ್ಗಕ್ಕೊಂದು ಕೈಪಿಡಿ, ಡಿ.ಆರ್.ವೆಂಕಟರಮಣನ್, ಶ್ರೀ ನಿತ್ಯಾನಂದ ಪ್ರಿಂಟರ್ಸ್, ಬೆಂ., 2001.) ನೀಡಿರುವ ಮಾರ್ಗದರ್ಶಿ ಸೂತ್ರವನ್ನು ನಾವು ನಮ್ಮ ಜೀವನದಲ್ಲಿ ಸೂಕ್ತವಾಗಿ ಅನುಸರಿಸುವುದು ವಿಹಿತವಾಗಿದೆ. ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು / ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು // ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ / ಪುಣ್ಯಶಾಲಿಯ ಪಾಡು - ಮಂಕುತಿಮ್ಮ // ಯಾವ ಸಂಸ್ಥೆಯಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇನೆ? ಎಂದಷ್ಟೇ ಕೇಳಿಕೊಳ್ಳುವುದಕ್ಕಿಂತ ಎಲ್ಲೆಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇನೋ ಆ ಅವಧಿಯಲ್ಲಿ ಸಂಸ್ಥೆಯ ವಿವಿಧ ಭಾಗೀದಾರರಿಗೆ ನಾನು ಏನನ್ನು ಮಾಡಿದ್ದೇನೆ? ಎಂಬ ಜಿಜ್ಞಾಸೆಯಲ್ಲಿ ಈ ಕ್ಷೇತ್ರದ ಪ್ರತಿಯೊಬ್ಬ ವೃತ್ತಿಪರನೂ ತೊಡಗಬೇಕಾದ ಅಗತ್ಯವಿದೆ. ನಮ್ಮ ಸೇವಾವಧಿ ಮುಗಿದ ನಂತರವೂ ನಾವು ದುಡಿದ ಸಂಸ್ಥೆಗಳಲ್ಲಿ ನಾವು ಯಾವ ಪ್ರಮಾಣದ ಕೊಡುಗೆ ನೀಡಿದ್ದೇವೆ ಎಂಬ ತುಲನೆಯನ್ನು ನಾವು ಭಾಗೀದಾರರಿಗೆ ರೂಪಿಸಿದ ಕಾರ್ಯಕ್ರಮಗಳು, ಅವು ಅವರ ಜೀವನದ ಮೇಲೆ ಬೀರಿದ ಪರಿಣಾಮಗಳ ಮಾನದಂಡದ ಮೇಲೆಯೇ ನಿರ್ಧರಿತವಾಗುತ್ತದೆ. ಸಂಸ್ಥೆಯ ಗುರಿ ಸಾಧನೆಗೆ ಮಾನವ ಸಂಪನ್ಮೂಲ ವಿಭಾಗದ ಪಾತ್ರ ಮಹತ್ತರವಾದುದು. ಸಂಸ್ಥೆಯ ಆಸ್ತಿಯಾದ ಉದ್ಯೋಗಿಗಳ ಅಂತ:ಸ್ಸತ್ವ ಗರಿಷ್ಠ ಮಟ್ಟದಲ್ಲಿ ಬೆಳಕಿಗೆ ಬರಲು ಅವಕಾಶಗಳನ್ನು ನಿರ್ಮಿಸುವ, ಸಂಸ್ಥೆಯ ಇತರ ಭಾಗೀದಾರರ ಏಳ್ಗೆಯನ್ನು ಸಾಕಾರಗೊಳಿಸುವ, ನೆರೆಹೊರೆಯ ಸಮುದಾಯಗಳಿಗೆ ದಾರಿದೀಪವಾಗುವ ವಿಶಿಷ್ಟ ಅವಕಾಶ ಈ ವಿಭಾಗದ ವೃತ್ತಿಪರರಿಗಿದೆ. ಸಂಸ್ಥೆಯ ದೀರ್ಘಕಾಲಿಕ ಹಿತವನ್ನು ಕಾಪಾಡುವುದರ ಜೊತೆಗೆ ಹಲವು ಜನರ ಬಾಳ ಹಣತೆಗಳನ್ನು ಬೆಳಗಬಹುದಾದ ಸಾಧ್ಯತೆ ಈ ಕ್ಷೇತ್ರದಲ್ಲಿದೆ. ತಮ್ಮ ಹೊಣೆಗಾರಿಕೆಯನ್ನು ವಸ್ತುನಿಷ್ಠವಾಗಿಯೂ ಸಮತೋಲನದಿಂದಲೂ ನಿರ್ವಹಿಸುತ್ತಲೇ ಕನ್ನಡನಾಡಿನ ಅಸ್ಮಿತೆಯ ಹಣತೆಯನ್ನು ಆರದಂತೆ ನಿರಂತರವಾಗಿ ಬೆಳಗಬಹುದಾದ ಸದವಕಾಶ ಮಾನವ ಸಂಪನ್ಮೂಲ ವೃತ್ತಿಪರರಿಗೆ ಹೆಚ್ಚಾಗಿದೆ. ಈ ವೃತ್ತಿಗೂ, ನಾಡಿಗೂ ನಾವು ಏನನ್ನು ಕೊಟ್ಟೆವು? ಎಂಬ ಚಿಂತನೆಯಲ್ಲಿ ನಾವು ನಡೆದ ಹಾದಿಯನ್ನು ಹಿಂದಿರುಗಿ ನೋಡಿದಾಗ ಆರದ ಹೆಮ್ಮೆಯ ಈ ಹಣತೆಯ ಬೆಳಕು ನಮಗೆ ನಿಜವಾದ ಆತ್ಮತೃಪ್ತಿಯನ್ನು ನೀಡಿ ನಮ್ಮ ಮುಖದಲ್ಲಿ ಸಹಜ ಮಂದಹಾಸವನ್ನು ಮೂಡಿಸಬೇಕಲ್ಲವೆ? ಹಾಗಿದ್ದರೆ ಬನ್ನಿ ಸ್ನೇಹಿತರೆ, ನಾವು ಸಣ್ಣ ಹಣತೆಗಳಾಗೋಣ!
1 Comment
|
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |