ಗೋವಿಂದರಾಜುಎನ್.ಎಸ್.
ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು, ಕರ್ನ್-ಲಿಬರ್ಸ್ (ಇಂಡಿಯ) ಪ್ರೈ.ಲಿ., ಅಂತರಸನಹಳ್ಳಿ, ತುಮಕೂರು.
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2017 ರಲ್ಲಿ ಬಹುಮಾನ ಪಡೆದ ಲೇಖನ
ಕಳೆದ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಜಾಗತೀಕರಣ, ಮುಕ್ತ ಆರ್ಥಿಕ ನೀತಿ, ವಿದೇಶಿ ಬಂಡವಾಳದ ಹರಿವು, ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ ಇನ್ನು ಹಲವಾರು ಬದಲಾವಣೆಗಳಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ಅಲ್ಲದೆ ಕಾರ್ಮಿಕ ಕಾನೂನುಗಳಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳನ್ನು ತರಲಾಗಿದೆ.
ಈ ಬದಲಾವಣೆಗಳಿಂದಾಗಿ ಕೈಗಾರಿಕಾ ಅಭಿವೃದ್ದಿ ಮತ್ತು ಹೆಚ್ಚಿನ ಕೆಲಸಗಳ ವೃದ್ದಿಯಲ್ಲದೆ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಿದ್ದರೂ ಕಾರ್ಮಿಕ ಕಾನೂನುಗಳ ಬದಲಾವಣೆಗಳು ಕೈಗಾರಿಕೆಯ ಉತ್ಪಾದನಾ ವೆಚ್ಚಗಳ ಮೇಲೆ ತಾತ್ಕಾಲಿಕ ಹೆಚ್ಚುವರಿ ಪ್ರಭಾವ ಉಂಟು ಮಾಡಿರುತ್ತವೆ.
ಈ ಬದಲಾವಣೆಗಳಿಂದಾಗಿ ಕಾರ್ಮಿಕರ ಮತ್ತು ಕಾರ್ಮಿಕ ಸಂಘಗಳ ಧೋರಣೆಗಳಲ್ಲಿ ಕೆಲವೊಂದು ಬದಲಾವಣೆಗಳಿದ್ದರೂ ಗಣನೀಯ ಬದಲಾವಣೆಗಳೇನು ಕಂಡುಬಂದಿರುವುದಿಲ್ಲ. ಕನಿಷ್ಠ ಪಕ್ಷ ಕಳೆದ ಒಂದು ದಶಕದಿಂದ ಕಾರ್ಮಿಕರ ಮತ್ತು ಕಾರ್ಮಿಕ ಸಂಘಗಳ ನೀತಿ, ಧೋರಣೆಗಳು ಮತ್ತು ನಡತೆಯು ಸಾಮಾನ್ಯವಾಗಿ ಒಂದೇ ರೀತಿ ಮುಂದುವರಿದಿದೆ. ಮತ್ತಷ್ಟು ಮುಂದುವುರಿದು ಹೇಳುವುದಾದರೆ, ಕಾರ್ಮಿಕ ಸಂಘಟನೆಗಳಿಂದ ಶಾಶ್ವತವಾಗಿ ಕೆಲವೊಂದು ವಲಯಗಳು ದೂರ ಉಳಿಯುತ್ತವೆ ಎಂದುಕೊಂಡ ವಲಯಗಳಲ್ಲಿಯೂ ಕಾರ್ಮಿಕ ಸಂಘಗಳ ಉದಯವಾದದ್ದು ಇತ್ತೀಚಿನ ವರ್ಷಗಳಲ್ಲಿನ ಬೆಳವಣಿಗೆ. ಮಾಹಿತಿ ತಂತ್ರಜ್ನಾನ ಮತ್ತು ಸಂಬಂದಿತ ವಲಯಗಳಲ್ಲಿನ ನೌಕರರ ವೇತನಗಳು ಮತ್ತು ಸೌಲಭ್ಯಗಳು ಕಾರ್ಮಿಕ ಚಳುವಳಿಯನ್ನು ದೂರ ಇಡುತ್ತವೆ ಎಂದುಕೊಂಡಿದ್ದೆವು ಆದರೆ ಅದು ಸುಳ್ಳಾಯಿತು. ಮಾನವ ಸಂಪನ್ಮೂಲ ವಿಭಾಗವು ಕಂಪನಿಯ ಒಂದು ಮುಖ್ಯ ವಿಭಾಗ. ನೇಮಕಾತಿ ಪ್ರಕ್ರಿಯೆಯಿಂದ ಹಿಡಿದು ತರಬೇತಿ ಮತ್ತು ಅಭಿವೃದ್ದಿ, ಸಾಮಾನ್ಯ ಆಡಳಿತ, ಸರಕಾರಿ ಮತ್ತು ಬಾಹ್ಯ ಪರಿಸರ ಸಂಬಂಧಗಳು, ದಕ್ಷತೆಯ ಮೌಲ್ಯಮಾಪನ, ಕಾನೂನು ನಿಯಮಗಳ ಅನುಸರಣೆ, ವೇತನ ಮತ್ತು ಸೌಲಭ್ಯಗಳ ನಿರ್ವಹಣೆ, ಕಾರ್ಮಿಕ ಕಲ್ಯಾಣ, ರಾಜೀನಾಮೆ ಮತ್ತು ಬಿಡುಗಡೆ ಪ್ರಕ್ರಿಯೆ, ಕೈಗಾರಿಕಾ ಬಾಂಧವ್ಯ ಇನ್ನೂ ಅನೇಕ ಮುಖ್ಯ ಕಾರ್ಯಗಳನ್ನು ಮಾನವ ಸಂಪನ್ಮೂಲ ವಿಭಾಗವು ನಿರ್ವಹಿಸುತ್ತದೆ. ಎಲ್ಲ ಕಾರ್ಯಗಳನ್ನು ದಕ್ಷವಾಗಿ ನಿರ್ವಹಿಸುವುದು ಕೈಗಾರಿಕೆಯ ಆರೋಗ್ಯಕ್ಕೆ ಅತಿ ಅವಶ್ಯಕ. ಇವುಗಳಲ್ಲಿ ಉತ್ತಮ ಕೈಗಾರಿಕಾ ಬಾಂಧವ್ಯ ಕೈಗಾರಿಕೆಯಲ್ಲಿ ಯಾವಾಗಲು ಇರುವಂತೆ ನೋಡಿಕೊಳ್ಳುವುದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ಮಹತ್ತರ ಜವಾಬ್ಧಾರಿ. ಕೈಗಾರಿಕಾ ಬಾಂಧವ್ಯ ಅತಿ ಸೂಕ್ಷ್ಮವಾದ ಹಾಗು ಅತಿ ಮುಖ್ಯವಾದ ಜವಾಬ್ದಾರಿ. ನಮಗೆ ತಿಳಿದಿರುವಂತೆ ಕೈಗಾರಿಕಾ ಬಾಂಧವ್ಯಗಳು ಕೆಟ್ಟು ಹಲವಾರು ಕಂಪನಿಗಳು ಸಮಸ್ಯೆಗೆ ಸಿಕ್ಕಿ ತೊಂದರೆ ಅನುಭವಿಸುತ್ತಿರುವುದನ್ನು ಮತ್ತು ಕೆಲವು ಕಂಪನಿಗಳು ಬಾಗಿಲು ಮುಚ್ಚಿರುವುದನ್ನು ಸಹ ನೋಡಿರುತ್ತೇವೆ. ಇದಕ್ಕೆ ಕಾರಣಗಳು ಹಲವಾರು. ಕೆಲವೊಮ್ಮೆ ಕಂಪನಿಯು ನೇರವಾಗಿ ಜವಾಬ್ಧಾರಿಯಾದರೆ, ಇನ್ನೊಮ್ಮೆ ಕಾರ್ಮಿಕ ಸಂಘಗಳು ನೇರ ಕಾರಣಗಳಾಗಿರುತ್ತವೆ. ಆದರೆ ಕಾರ್ಮಿಕ ಸಂಘಗಳಿದ್ದರೂ ಹಲವಾರು ಕಂಪನಿಗಳು ಯಶಸ್ವಿಯಾಗಿ ವ್ಯವಹಾರ ನಡೆಸಿಕೊಂಡು ಬಂದಿರುತ್ತವೆ. ಇದಕ್ಕೆ ಕಾರಣಗಳು ಆ ಕಂಪನಿಗಳ ವೃತ್ತಿಪರತೆ, ವ್ಯವಸ್ಥಾಪಕರ ನಾಯಕತ್ವ, ಕಾರ್ಮಿಕರ ಧೋರಣೆ, ಕಾರ್ಮಿಕ ನಾಯಕರುಗಳ ಉತ್ತಮ ನಾಯಕತ್ವ ಮತ್ತು ಹೊಂದಾಣಿಕೆಗಳು, ಇನ್ನು ಮುಂತಾದವುಗಳು. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ವೃತ್ತಿಪರತೆ, ನಾಯಕತ್ವ ಮತ್ತು ಧೋರಣೆಗಳು ಹೆಚ್ಚಿನ ಮಹತ್ವವನ್ನು ವಹಿಸುತ್ತವೆ. ನನ್ನ ಎರಡು ದಶಕಗಳಮಾನವ ಸಂಪನ್ಮೂಲ ವೃತ್ತಿಯ ಅನುಭವದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಸಮಯ ಕಾರ್ಮಿಕ ಸಂಘಗಳೊಂದಿಗೆ ಒಡನಾಟವಿದ್ದು ಉತ್ತಮ ಕೈಗಾರಿಕಾ ಬಾಂಧವ್ಯ ಹೇಗೆ ಮಾನವ ಸಂಪನ್ಮೂಲ ಅಧಿಕಾರಿಯ ಯಶಸ್ಸಿಗೆ ಕಾರಣವಾಗಬಲ್ಲದು ಎಂಬುದನ್ನು ಕಂಡುಕೊಂಡಿದ್ದೇನೆ ಮತ್ತು ನಮ್ಮ ಯಾವ ಕೆಲಸಗಳು, ನಡತೆ ಮತ್ತು ನೀತಿಗಳು ಇದಕ್ಕೆ ಕಾರಣಗಳಾಗಬಲ್ಲವು ಎಂಬುದು ನನ್ನ ವೃತ್ತಿ ಜೀವನ ನನಗೆ ಕಲಿಸಿಕೊಟ್ಟಿದೆ. ಯಾವ ತಂತ್ರಗಳು, ಮಾರ್ಗಸೂಚಿಗಳು ಮತ್ತು ಧೋರಣೆಗಳು ಉತ್ತಮ ಕೈಗಾರಿಕಾ ಬಾಂಧವ್ಯ ತರಬಲ್ಲವು ಎನ್ನುವುದನ್ನು ಚರ್ಚಿಸುವುದಕ್ಕಿಂತ ಮುಂಚೆ ಮಾನವ ಸಂಪನ್ಮೂಲ ವೃತ್ತಿನಿರತರಿಗೆ ಕೆಲವೊಂದು ಮೂಲ ಮಾಹಿತಿಗಳು, ಸಾರಾಂಶಗಳು, ಕೆಲವೊಂದು ಕಾನೂನುಗಳ ಪ್ರಮುಖ ಅಂಶಗಳ ಅರಿವು ಇರಲೇ ಬೇಕಾಗುತ್ತದೆ. ಇವುಗಳ ಅರಿವು ಉತ್ತಮ ಕೈಗಾರಿಕಾ ಬಾಂಧವ್ಯಕ್ಕೆ ಅಗತ್ಯವಾಗಿ ನಾಂದಿಯಾಗಬಲ್ಲವು ಮತ್ತು ಅವಶ್ಯಕ ಕೂಡ. ಈ ಆಂಶಗಳನ್ನು ಈಗ ನೋಡೋಣ. 1. ಕೈಗಾರಿಕೆಗಳಲ್ಲಿ ಕಾರ್ಮಿಕ ಸಂಘಗಳ ಹುಟ್ಟಿಗೆ ಕಾರಣಗಳೇನು? ನನ್ನ ವೃತ್ತಿ ಜೀವನದಲ್ಲಿ ನಾನು ಕೆಲಸ ಮಾಡುತ್ತಿರುವ ಕಂಪನಿಗಳಲ್ಲಿ ಕಾರ್ಮಿಕ ಸಂಘಗಳು ಏಕೆ ಹುಟ್ಟಿಕೊಂಡವು ಎಂಬುದನ್ನು ಅಧ್ಯಯನ ಮಾಡಿದಾಗ ನನಗೆ ಗೊತ್ತಾದ ಕಾರಣಗಳೆಂದರೆ - ಕಾರ್ಮಿಕರ ಅತಿಯಾದ ಶೋಷಣೆ, ತಾರತಮ್ಯ, ಕಾರ್ಮಿಕರು ಸಂಬಳ ಮತ್ತು ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ಬೇಡಿಕೆಗಳು, ಮಹತ್ವ ಕೊಟ್ಟು ನಮ್ಮ ಮಾತನ್ನೂ ಕೇಳಬೇಕು ಎಂಬ ಕಾರ್ಮಿಕರ ಮೂಲ ಅವಶ್ಯಕತೆ, ಕಾರ್ಮಿಕ ಸಂಘಗಳ ಸದಸ್ಯತ್ವವನ್ನು ಹೆಚ್ಚಿಸುವ ಒತ್ತಡ, ಕಾರ್ಮಿಕ ಮಹಾ ಸಂಘಗಳ ಉಳಿವು, ರಾಜಕೀಯ ಪ್ರಭಾವಗಳು, ಕೆಲವು ವ್ಯಕ್ತಿಗಳ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕಾರ್ಮಿಕರ ಭದ್ರತೆಯ ಅವಶ್ಯಕತೆಗಳು. ಅತಿಯಾದ ಶೋಷಣೆ, ತಾರತಮ್ಯ ಮತ್ತು ನೆರೆ ಕಂಪನಿಯ ಕಾರ್ಮಿಕ ಸಂಘಗಳ ಪ್ರಭಾವ ಬಹುತೇಕ ಕಂಪನಿಗಳಲ್ಲಿ ಕಾರ್ಮಿಕ ಸಂಘಗಳ ಹುಟ್ಟಿಗೆ ಕಾರಣವೆಂಬುದು ನನ್ನ ವೃತ್ತಿ ಅನುಭವದಲ್ಲಿ ಕಂಡುಕೊಂಡ ಸತ್ಯ. 2. ಕೈಗಾರಿಕೆಯಲ್ಲಿ ಕಾರ್ಮಿಕ ಸಂಘಗಳ ಬೆಳವಣಿಗೆಯ ಹಂತಗಳು ಕಾರ್ಮಿಕ ಸಂಘಗಳು ಕಾರ್ಖಾನೆಗಳಲ್ಲಿ ಹೇಗೆ ಬೆಳೆಯುತ್ತವೆ ಎಂಬುದು, ಆ ಕಂಪನಿಯ ನೀತಿ ಮತ್ತು ಧೋರಣೆಗಳು, ಯಾವ ಹಂತದಲ್ಲಿ ಕಾರ್ಮಿಕ ಸಂಘ ಹುಟ್ಟಿಕೊಂಡಿದೆ, ಕಾರ್ಮಿಕರ ವಯಸ್ಸು, ಕಂಪನಿಯ ವಯಸ್ಸು, ಕಂಪನಿಗಳ ವೃತ್ತಿಪರತೆ, ವ್ಯವಸ್ಥಾಪಕರ ನಾಯಕತ್ವ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ವೃತ್ತಿಪರತೆ ಮತ್ತು ನಾಯಕತ್ವ ಅವರ ದಕ್ಷತೆ ಅಲ್ಲದೆ ಕಾರ್ಮಿಕರ ಶಿಕ್ಷಣದ ಮಟ್ಟ, ಅವರ ಪ್ರೌಢತೆ ಹಾಗೂ ಕಾರ್ಮಿಕ ಸಂಘಗಳ ಬಾಹ್ಯ ನಾಯಕರ ನಾಯಕತ್ವದ ಗುಣಮಟ್ಟ ಮತ್ತು ಪ್ರಾಮಾಣಿಕತೆ ಇವುಗಳು ನಿರ್ಧರಿಸುತ್ತವೆ. ಈ ಬೆಳವಣಿಗೆಯ ಅರಿವನ್ನು ಉಪಯೋಗಿಸಿಕೊಂಡು ಅವರ ಧನಾತ್ಮಕ ಅಭಿವೃದ್ದಿ ಮತ್ತು ಬೆಳವಣಿಗೆಯನ್ನು ವ್ಯವಸ್ತಿತವಾಗಿ ನಿರ್ವಹಿಸಬಹುದು. ಸೂಕ್ತ ಅನುಭವ, ಮುಂಜಾಗ್ರತೆ ಮತ್ತು ಈ ಅರಿವಿನ ಕೊರತೆ ಇದ್ದಲ್ಲಿ ಕಂಪನಿಯ ಮತ್ತು ಕಾರ್ಮಿಕರ ಒಳಿತಿಗೆ ಅನುವಾಗಬಹುದಾದಂತಹ ಬೆಳವಣಿಗೆಯನ್ನು ಸಾಧಿಸಲು ಹೆಚ್ಚು ಸಮಯ ಬೇಕಾಗಬಹುದು ಮತ್ತು ಸಾಧ್ಯಾವಾಗದೇ ಇರಬಹುದು. ಈ ಮೇಲಿನ ಅಂಶಗಳು ಎಷ್ಟರ ಮಟ್ಟಿಗೆ ಧನಾತ್ಮಕವಾಗಿವೆ ಎಂಬುದರ ಮೇಲೆ ಕಾರ್ಮಿಕರ ಸಂಘಗಳ ಧನಾತ್ಮಕ ಬೆಳವಣಿಗೆಯು ನಿಂತಿರುತ್ತದೆ. ಈ ಅಂಶದ ಆಧಾರದ ಮೇಲೆ ಸಾಮಾನ್ಯವಾಗಿ ಕಾರ್ಖಾನೆಯಲ್ಲಿ ಕಾರ್ಮಿಕ ಸಂಘಗಳ ಬೆಳವಣಿಗೆಯನ್ನು ಹೀಗೆ ತೋರಿಸಬಹುದು.
3. ಕಾರ್ಮಿಕ ಸಂಘಗಳ ವಿಧಗಳು
ಕಾರ್ಮಿಕ ಸಂಘದ ಹುಟ್ಟಿಗೆ ಕಾರಣವಾದ ಅಂಶಗಳು, ಕಾರ್ಖಾನೆಯ ಪರಿಸರ, ಸ್ಥಳ, ಅವುಗಳ ಬೆಳವಣಿಗೆಯಲ್ಲಿ ಕಂಪನಿಯ ನಾಯಕರು ಮತ್ತು ಒಳ ಹಾಗು ಹೊರ ಕಾರ್ಮಿಕ ನಾಯಕರು ವಹಿಸುವ ಪಾತ್ರ, ಅವರ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯ ಆಧಾರದ ಮೇಲೆ ಕಾರ್ಮಿಕ ಸಂಘಗಳು ತಮ್ಮದೇ ಆದ ಅಸ್ಥಿತ್ವ ಮತ್ತು ಆಕಾರವನ್ನು ಪಡೆದುಕೊಳ್ಳುತ್ತವೆ. ಇವುಗಳ ಸ್ವರೂಪ ಮತ್ತು ಆಧಾರದ ಮೇಲೆ ಕಾರ್ಮಿಕ ಸಂಘಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.
ಪ್ರಗತಿಪರ ಕಾರ್ಮಿಕ ಸಂಘವು ಆದರ್ಶ ಸಂಘವಾಗಿದ್ದು ಕಂಪನಿಯು ಇಂತಹ ಕಾರ್ಮಿಕ ಸಂಘದ ಬೆಳವಣಿಗೆಗೆ ಕಾರಣವಾದಲ್ಲಿ ಬಹುಕಾಲ ಕಂಪನಿಯನ್ನು ಸುದೀರ್ಘವಾಗಿ ನಡೆಸಿ ಎರಡೂ ಪಕ್ಷಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಂಡು ಪ್ರಗತಿಯನ್ನು ಸಾಧಿಸಬಹುದು. ಆಕ್ರಮಣಕಾರಿ/ತೀವ್ರಗಾಮಿ ಕಾರ್ಮಿಕ ಸಂಘದ ಉದಯ ಮತ್ತು ಮುಂದುವರಿಕೆ ಎರಡೂ ಪಕ್ಷಗಳಿಗೆ ಹಾನಿಯನ್ನುಂಟು ಮಾಡಿ ಕಂಪನಿಯ ಅವನತಿಗೆ ಕಾರಣವಾಗಬಹುದು. ದುರ್ಬಲ ಮತ್ತು ಪರಿಣಾಮಕಾರಿಯಲ್ಲದ ಸಂಘಗಳು ತಾತ್ಕಾಲಿಕವಾಗಿ ಕೈಗಾರಿಕೆಗೆ ಉತ್ತಮವೆನಿಸಿದರೂ ದೀರ್ಘಾವದಿಯಲ್ಲಿ ಇದರಿಂದ ಹಾನಿಗಳೇ ಹೆಚ್ಚಾಗಬಹುದು.
4. ಬೇಡಿಕೆಗಳು vs ಬೇಡಿಕೆಗಳು ಕೈಗಾರಿಕೆಯ ಆಡಳಿತವರ್ಗ ಮತ್ತು ಕಾರ್ಮಿಕರಿಗೆ ಅವುಗಳದ್ದೇ ಆದ ಬೇಡಿಕೆಗಳು ಮತ್ತು ಅಗತ್ಯಗಳಿರುತ್ತವೆ. ಎರಡು ಪಕ್ಷಗಳ ಉದ್ದೇಶಗಳು ಬೇರೆ ಬೇರೆ ಇರುವುದರಿಂದ ಈ ಬೇಡಿಕೆಗಳು ಪರಸ್ಪರ ವಿರುದ್ದವಾಗಿ ಪ್ರಯಾಣಿಸುತ್ತವೆ. ಆಡಳಿತ ವರ್ಗದ ಉದ್ದೇಶವು ಸಂಪತ್ತಿನ ಅಭಿವೃದ್ದಿಯೊಂದಿಗೆ ಲಾಭವನ್ನು ಹೆಚ್ಚಿಸುವುದಾದರೆ ಕಾರ್ಮಿಕ ಸಂಘಟನೆಯ ಉದ್ದೇಶಗಳು ಕಾರ್ಮಿಕರ ವೇತನ ಮತ್ತು ಸವಲತ್ತುಗಳನ್ನು ಹೆಚ್ಚಿಸಿ ಅವರ ಜೀವನಮಟ್ಟವನ್ನು ಉತ್ತಮಗೊಳಿಸುವುದಾಗಿರುತ್ತದೆ. ಇವುಗಳ ನಡುವೆ ಸಮತೋಲನ ಸಾಧಿಸುವುದು ನಿಜವಾದ ಸವಾಲೇ ಸರಿ. ಇವುಗಳ ಸ್ವರೂಪ ಮತ್ತು ಬೇಡಿಕೆಗಳ ಪಟ್ಟಿಯನ್ನು ಉತ್ತಮ ಕೈಗಾರಿಕಾ ಬಾಂಧವ್ಯಕ್ಕೆ ಮಾರ್ಗಸೂಚಿಗಳು ಮತ್ತು ತಂತ್ರಗಳನ್ನು ಹೇಳುವಾಗ ಮತ್ತೆ ಇವುಗಳನ್ನು ಹೇಳುವ ಅವಶ್ಯಕತೆ ಇರುವುದರಿಂದ ಇಲ್ಲಿ ಇಷ್ಟಕ್ಕೆ ನಿಲ್ಲಿಸೋಣ. 5. ಅವಶ್ಯಕವಾಗಿ ತಿಳಿದಿರಬೇಕಾದ ಕಾರ್ಮಿಕ ಕಾನೂನುಗಳ ಅರಿವು. ಉತ್ತಮ ಕೈಗಾರಿಕಾ ಸಂಭಂದಗಳನ್ನು ನಿರ್ವಹಿಸಲು ಮಾನವ ಸಂಪನ್ಮೂಲ ವಿಭಾಗದ ನಾಯಕರುಗಳಿಗೆ ಎಲ್ಲ ಕಾರ್ಮಿಕ ಕಾನೂನುಗಳ ಪೂರ್ಣ ಅರಿವು ಅತ್ಯಾವಶ್ಯಕ. ಅದರಲ್ಲೂ ಔದ್ಯೋಗಿಕ ವಿವಾದ ಕಾಯ್ದೆ 1947, ಕಾರ್ಮಿಕ ಸಂಘಗಳ ಕಾಯ್ದೆ 1926 ಮತ್ತು ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆ 1946 ಇವುಗಳ ಪೂರ್ಣ ಅರಿವು ಅತ್ಯಾವಶ್ಯಕ. ಈ ಮೂರು ಕಾಯ್ದೆಗಳಲ್ಲಿ ಗೊತ್ತಿರಲೇಬೇಕಾದ ನಿಯಮಗಳು/ನಿಬಂಧನೆಗಳು ಕೆಲವೊಂದಿವೆ. ಅವುಗಳು ಹೀಗಿವೆ:-
ಇಲ್ಲಿ ಅತಿಮುಖ್ಯ ಅಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದ್ದು ಕಾರ್ಮಿಕ ಕಾನೂನುಗಳ ಸಂಪೂರ್ಣ ಅರಿವು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಇರಬೇಕಾಗುತ್ತದೆ ಮತ್ತು ಇನ್ನೂ ಮುಖ್ಯವಾದ ಅಂಶಗಳು ಸಾಕಷ್ಟಿವೆ.
6. ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ತಂತ್ರಗಳ ಪೂರ್ಣ ಅರಿವು ಮತ್ತು ಅವುಗಳಿಂದ ಕೈಗಾರಿಕೆಗೆ ಆಗಬಹುದಾದ ಅನಾಹುತಗಳ ಅರಿವು ಇರಬೇಕು. ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಂತ್ರಗಳನ್ನು ಹೂಡುತ್ತವೆ. ಇವುಗಳ ಅರಿವು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಇದ್ದಲ್ಲಿ ಅಂತಹ ಸಮಯಗಳಲ್ಲಿ ಕಂಪನಿಯು ತನ್ನ ಅವಶ್ಯಕತೆಗಳನ್ನು ಮತ್ತು ಕಂಪನಿಯ ದಿನನಿತ್ಯದ ನಿರ್ವಹಣೆಯನ್ನು ಸುಗಮವಾಗಿರುವಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ತಂತ್ರಗಳು ಮತ್ತು ಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತದೆ. ಇದಲ್ಲದೆ ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ತಂತ್ರಗಳಿಂದ ಕೈಗಾರಿಕೆಯ ವ್ಯವಹಾರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಗಂಭೀರ ಅರಿವು ಇದ್ದಲ್ಲಿ, ಇಂತಹ ಸಮಯಗಳಲ್ಲಿ ಕೈಗಾರಿಕೆಯ/ಕಂಪನಿಯ ಹಕ್ಕುಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಿ ಸಜ್ಜಾಗಲು ಹೆಚ್ಚು ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಕಾರ್ಮಿಕರು ಅನುಸರಿಸುವ ತಂತ್ರಗಳು ಮತ್ತು ಅದರಿಂದ ಕಂಪನಿಗೆ ಆಗಬಹುದಾದ ತೊಂದರೆಗಳನ್ನು ಈ ಕೆಳಗೆ ಕೊಟ್ಟಂತೆ ಪಟ್ಟಿ ಮಾಡಬಹುದು.
ಕಾರ್ಮಿಕರಲ್ಲಿ ಹಾಗು ಆಡಳಿತ ವರ್ಗದಲ್ಲಿ ಉತ್ತಮ ನಾಯಕತ್ವ, ಪ್ರಾಮಾಣಿಕತೆ ಮತ್ತು ಪ್ರಭುದ್ದತೆ ಇದ್ದ ಪಕ್ಷದಲ್ಲಿ ಇಂತಹ ಅನಾನುಕೂಲಗಳು ಆಗದೆ ಇರುವಂತೆ ನೋಡಿಕೊಳ್ಳಬಹುದು.ಉತ್ತಮ ಕಾರ್ಮಿಕ-ಕೈಗಾರಿಕಾ ಬಾಂಧವ್ಯಕ್ಕೆ ಸಹಕಾರಿಯಾಗುವಂತಹ ಕೆಲವೊಂದು ಅಂಶಗಳನ್ನು ಇಲ್ಲಿಯವರೆಗೆ ನೋಡಿದೆವು. ಇನ್ನುಮುಂದೆ ಉತ್ತಮ ಕಾರ್ಮಿಕ-ಕೈಗಾರಿಕಾ ಬಾಂಧವ್ಯ ಸಾಧಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ತಂತ್ರಗಳನ್ನು ನೋಡೋಣ.
1. ಕೆಲವು ಮೂಲಭೂತ ತತ್ವಗಳ ಪಾಲನೆ ಕಾರ್ಮಿಕರಿಗೆ ಸಂಬಂದಿಸಿದಂತೆ ಕಂಪನಿಯು ಅನುಸರಿಸುವ ನೀತಿ ನಿಯಮಗಳು, ಧೋರಣೆಗಳು ಕೈಗಾರಿಕಾ ಬಾಂಧವ್ಯ ಯಾವರೀತಿಯಲ್ಲಿ ರೂಪುಗೊಳ್ಳುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನ್ಯಾಯೋಚಿತವಾದ ಮತ್ತು ಸಾರ್ವತ್ರಿಕವಾಗಿ ಒಪ್ಪಿತ ನೀತಿ ಸಂಹಿತೆಗಳು ಉತ್ತಮ ಕೈಗಾರಿಕಾ ಬಾಂಧವ್ಯವನ್ನು ರೂಪಿಸುವುದರಲ್ಲಿ ಸಂಶಯವಿಲ್ಲ. ಈ ರೀತಿಯ ನಡಾವಳಿಗಳನ್ನು ಉಭಯ ಪಕ್ಷಗಳು ಅಳವಡಿಸಿಕೊಂಡಲ್ಲಿ ಸುಧೀರ್ಘ ಉತ್ತಮ ಕೈಗಾರಿಕಾ ಬಾಂಧವ್ಯವನ್ನು ಸಾಧಿಸಬಹುದು. ಅನುಸರಿಸಬೇಕಾದ ಕೆಲವು ಮೂಲ ನೀತಿ ಮತ್ತು ತತ್ವಗಳು ಹೀಗಿವೆ.
2. ಎರಡೂ ಪಕ್ಷಗಳ ನಿರೀಕ್ಷೆಗಳು, ಹಕ್ಕುಗಳು ಮತ್ತು ಅಗತ್ಯಗಳ ನಡುವೆ ಸಮತೋಲನ ಸಾಧಿಸುವುದು.
ಕಾರ್ಮಿಕ ಮತ್ತು ಆಡಳಿತ ವರ್ಗಗಳ ಅವಶ್ಯಕತೆಗಳು, ಬೇಡಿಕೆಗಳು ಮತ್ತು ಹಕ್ಕುಗಳು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಪ್ರಯಾಣಿಸುತ್ತವೆ. ಇವುಗಳ ನಡುವೆ ಹೊಂದಾಣಿಕೆ ಮತ್ತು ಸಮತೋಲನ ಸಾಧಿಸುವುದು ಒಂದು ಕಲೆಯೇ ಸರಿ. ಹೊಂದಾಣಿಕೆ ಮತ್ತು ಸಮತೋಲನ ಸಾಧಿಸುವುದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ಮತ್ತು ಅಧಿಕಾರಿಗಳಿಗೆ ಒಂದು ಕಷ್ಟ ಸಾಧ್ಯವಾದ ಸವಾಲು. ಇವುಗಳ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಮತ್ತು ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ ಎನ್ನುವುದರ ಮೇಲೆ ಕೈಗಾರಿಕೆಯ ಬೆಳವಣಿಗೆ ಮತ್ತು ಸಾಮರಸ್ಯ ನಿಂತಿರುತ್ತದೆ. ಕಾರ್ಮಿಕ ಸಂಘದ ಅಸ್ತಿತ್ವವಿರುವ ಕೈಗಾರಿಕೆಗಳಲ್ಲಿ ಈ ಒಂದು ಸಾಮರ್ಥ್ಯವೇ ಪ್ರಮುಖವಾಗಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ಮತ್ತು ಅಧಿಕಾರಿಗಳ ಯಶಸ್ಸನ್ನು ನಿರ್ಧರಿಸುತ್ತದೆ. ಇದನ್ನು ಸಾಧಿಸುವುದು ಎಷ್ಟು ಕಷ್ಟವೋ ಅದು ಹಾಳಾಗದಂತೆ ನೋಡಿಕೊಂಡು ದೀರ್ಘಕಾಲ ಕಾಪಾಡುವುದು ಅಷ್ಟೇ ಕಷ್ಟ.
3. ಸಮಸ್ಯೆಗಳಿಗೆ, ನಿರೀಕ್ಷೆಗಳಿಗೆ ಪರಿಹಾರ ಹುಡುಕುವ ಚಾಕಚಕ್ಯತೆ ಮತ್ತು ನಾವೀನ್ಯತೆ.
ಕಾರ್ಖಾನೆಯಲ್ಲಿ ಬಹಳಷ್ಟು ಸಮಸ್ಯೆಗಳು ಮತ್ತು ತೊಂದರೆಗಳು ಹುಟ್ಟಿಕೊಳ್ಳುತ್ತವೆ ಮತ್ತು ನಿರೀಕ್ಷೆಗಳು ಕಾಲ ಕಾಲಕ್ಕೆ ಬದಲಾಗುತ್ತವೆ. ಇವುಗಳನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ ಎನ್ನುವುದರ ಮೇಲೆ ಕೈಗಾರಿಕಾ ಶಾಂತಿ ಮತ್ತು ಸಂಬಂಧಗಳ ಸಮತೋಲನ ನಿಂತಿರುತ್ತದೆ. ಇವುಗಳ ದುರ್ಬಲ ನಿರ್ವಹಣೆ ಕಾರ್ಖಾನೆಗೆ ನಿರಂತರ ತೊಂದರೆಗಳನ್ನು ತಂದೊಡ್ಡಬಹುದು.
4. ಕಾರ್ಮಿಕರು ಮತ್ತು ಆಡಳಿತವರ್ಗದೊಂದಿಗೆ ಆಗುವ ಒಪ್ಪಂದಗಳನ್ನು ಜಾಗರೂಕತೆಯಿಂದ ಬರೆಯಬೇಕು. ಒಪ್ಪಂದಗಳು ಉತ್ತಮ ಕೈಗಾರಿಕಾ ಬಾಂಧವ್ಯ ಸಾಧಿಸುವ ನಿಟ್ಟಿನಲ್ಲಿ ಶಕ್ತಿಯುತ ಆಯುಧ. ಜಾಗರೂಕತೆಯಿಂದ ಮತ್ತು ವಿವರವಾಗಿ ಬರೆದಿದ್ದಲ್ಲಿ ಎಷ್ಟೊಂದು ಸಮಸ್ಯೆಗಳಿಗೆ ಅದರಲ್ಲಿ ಪರಿಹಾರ ಹುಡುಕಬಹುದು. ಅಜಾಗರೂಕತೆಯಿಂದ ಬರೆದ ಒಪ್ಪಂದಗಳು ಸಾಕಷ್ಟು ಸಮಸ್ಯೆಗಳನ್ನೂ ಹುಟ್ಟು ಹಾಕಬಹುದು. ಉತ್ತಮ ಒಪ್ಪಂದಗಳಿಗೆ ಕೆಲವೊಂದು ಸಲಹೆಗಳು ಹೀಗಿವೆ.
5. ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ ತರಬೇತಿ ಮತ್ತು ಶಿಕ್ಷಣ.
ಸಾಮಾನ್ಯವಾಗಿ ಕಂಪನಿಯಲ್ಲಿ ಕಾರ್ಮಿಕ ಸಂಘದ ಉದಯದ ಆರಂಬಿಕ ಹಂತದಲ್ಲಿ ಕಾರ್ಮಿಕರ ವಯಸ್ಸು ಮತ್ತು ಪ್ರಭುದ್ದತೆ ಕಡಿಮೆ ಇದ್ದು ವಿವೇಚನೆ ಕಡಿಮೆ ಇರುತ್ತದೆ. ಅವರ ಬೆಳವಣಿಗೆಯಲ್ಲಿ ಕಂಪನಿಯು ಮತ್ತು ಬಾಹ್ಯ ಕಾರ್ಮಿಕ ನಾಯಕರು ವಹಿಸುವ ಪಾತ್ರ ಪ್ರಮುಖವಾಗಿರುತ್ತದೆ. ಬಾಹ್ಯ ಕಾರ್ಮಿಕ ನಾಯಕರಿಗಿಂತ ಹೆಚ್ಚಾಗಿ ಅದು ಕಂಪನಿಯ ಜವಾಬ್ಧಾರಿಯಾಗುತ್ತದೆ ಏಕೆಂದರೆ ಕಂಪನಿಯ ಬೆಳವಣಿಗೆ ಕಾರ್ಮಿಕರ ಶ್ರಮದ ಮೇಲೆ ನಿಂತಿರುತ್ತದೆ. ಈ ಧೋರಣೆಯು ನೇರ ಪ್ರತಿಫಲ ನೀಡದಿದ್ದರೂ ಪರೋಕ್ಷ ಪ್ರತಿಫಲವಂತು ಖಂಡಿತ ನೀಡುತ್ತದೆ. ಉತ್ತಮ ತರಬೇತಿದಾರರನ್ನು ಹುಡುಕಿ ಕಾರ್ಮಿಕರಿಗೆ ಜೀವನದ ಪಾಠ ಹೇಳಬೇಕು. ಧನಾತ್ಮಕ ಧೋರಣೆ, ವ್ಯಕ್ತಿತ್ವ ವಿಕಸನ, ಕೆಲಸ ಮತ್ತು ಜೀವನ ಇವುಗಳ ಸಮತೋಲನ ಹೇಗೆ, ಯಾವುದನ್ನು ಮತ್ತು ಹೇಗೆ ಹೋಲಿಕೆ ಮಾಡಬೇಕು, ಕಂಪನಿಯ ಕಷ್ಟಗಳೇನು, ಧನಾತ್ಮಕ ನಾಯಕತ್ವ, ಕುಟುಂಬ ಮತ್ತು ಸಂಬಂಧಗಳು, ಹೊಂದಾಣಿಕೆ ಏಕೆ ಮತ್ತು ಹೇಗೆ ಇವುಗಳ ತರಬೇತಿ ಮತ್ತು ಶಿಕ್ಷಣದಿಂದ ಉತ್ತಮ ಬಾಂಧವ್ಯಗಳಿಗೆ ಸಹಾಯ ಮಾಡುತ್ತವೆ. ಈ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ಕಾರ್ಮಿಕ ಸಂಘದ ವಿರೋದವನ್ನು ಮಾಡುವ ಅಂಶಗಳು ಇರಕೂಡದು. ಇದು ಇದ್ದ ಪಕ್ಷದಲ್ಲಿ ಕಾರ್ಮಿಕರ ಒಲವನ್ನು ಗಳಿಸುವುದು ಕಷ್ಟವಾಗಬಹುದು. 6. ಉತ್ತಮ ಸಂಭಂದಗಳು ಮತ್ತು ವಿಶ್ವಾಸವನ್ನು ಬೆಳೆಸಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಕಾರ್ಮಿಕರ ನಡುವೆ ಉತ್ತಮ ಸಂಬಂಧಗಳು ಮತ್ತು ವಿಶ್ವಾಸವನ್ನು ಬೆಳೆಸುವುದು ಕಷ್ಟವಾದ ಸವಾಲು ಆದರೆ ಸಾಧಿಸಬಹುದಾದ ಸವಾಲು. ಇದು ಸಾಧ್ಯವಾದರೆ ಕಾರ್ಯಕ್ಷೇತ್ರದ ಮೇಲೆ ಸಂಪೂರ್ಣ ನಿಯಂತ್ರಣ ನಮ್ಮದಾಗಬಹುದು.
ಮಾನವ ಸಂಪನ್ಮೂಲ ಅಧಿಕಾರಿಯು ತನ್ನ ಜವಾಬ್ಧಾರಿಗಳನ್ನು ಮರೆಯದೆ, ಕಂಪನಿಯ ಹಕ್ಕುಗಳನ್ನು ರಕ್ಷಿಸಿಕೊಂಡು, ರಹಸ್ಯ ಮಾಹಿತಿಗಳನ್ನು ಹಂಚಿಕೆ ಮಾಡದೆ, ಕಂಪನಿಯ ತಂತ್ರಗಳನ್ನು ಬಿಟ್ಟುಕೊಡದೆ ಕೆಲವೊಂದು ಕಾರ್ಯಗಳನ್ನು ನಿರಂತರವಾಗಿ ಕೈಗೊಂಡರೆ ಉತ್ತಮ ವಿಶ್ವಾಸ ಮತ್ತು ಸಂಬಂಧಗಳನ್ನು ಬೆಳೆಸಿಕೊಳ್ಳಬಹುದು. ನ್ಯಾಯೋಚಿತ ವರ್ತನೆಗಳು, ತಿಳಿಸಿ ಮಾಡಿದ ನಿರ್ಧಾರಗಳು, ಕಾರ್ಮಿಕರನ್ನು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು, ಅವರ ಕುಂದುಕೊರತೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸುವುದು, ಇತ್ಯಾದಿ ಕೆಲಸಗಳು, ಈ ನಿಟ್ಟಿನಲ್ಲಿ ಬಹಳ ಸಹಕಾರಿಯಾಗಬಹುದು. ಯಾವುದೇ ಕಾರಣದಿಂದ ಬಾಂಧವ್ಯಗಳ ಕುಸಿತ ಪ್ರಾರಂಭವಾದರೆ ಅದು ಕಂಪನಿಗೆ, ಕಾರ್ಮಿಕರಿಗೆ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗೆ ಸವಾಲುಗಳನ್ನು ತಂದೊಡ್ಡಬಹುದು.
7. ಸಾಮಾನ್ಯ ಜ್ಞಾನದ ಉಪಯೋಗದಿಂದ ಸಮಸ್ಯೆಗಳ ಪರಿಹಾರ. ಶಿಕ್ಷಣ ಮತ್ತು ಜ್ಞಾನ ಎಲ್ಲರಿಗೂ ಅವಶ್ಯಕ. ಇವುಗಳಿಗಿಂತ ಹೆಚ್ಚಾಗಿ ಸಾಮಾನ್ಯ ಜ್ಞಾನ ಮತ್ತು ಅದರ ಸರಿಯಾದ ಉಪಯೋಗ ತಿಳಿದಿದ್ದರೆ ಕೆಲಸದಲ್ಲಿ ಮತ್ತು ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಪರಿಹರಿಸಬಹುದು. ಕಾರ್ಮಿಕರು ಮತ್ತು ಆಡಳಿತವರ್ಗ ಮಾನವ ಸಂಪನ್ಮೂಲ ಅಧಿಕಾರಿಗೆ ಸಾಕಷ್ಟು ಸಮಸ್ಯೆಗಳನ್ನು ಕಾಲ ಕಾಲಕ್ಕೆ ತಂದೊಡ್ಡಬಹುದು. ಇವುಗಳ ಉತ್ತಮ ಪರಿಹಾರಕ್ಕೆ ಸಾಮಾನ್ಯ ಜ್ಞಾ ಉಪಯೋಗಿಸುವ ಪರಿ ತಿಳಿದಿರಬೇಕು. ನನ್ನ ಪ್ರಕಾರ ಸಾಮಾನ್ಯ ಜ್ಞಾನ ಎಂದರೆ ನಮ್ಮ ಸುತ್ತಮುತ್ತ ಇರುವ ಜನರ ಮತ್ತುಅವರ ವರ್ತನೆಯ ಅರಿವು, ನಮ್ಮಯೋಜಿತ ವರ್ತನೆಯಿಂದ ಇತರರ ವರ್ತನೆಯಲ್ಲಿ ಬದಲಾವಣೆ ತರುವುದು ಮತ್ತು ಯಾವುದೇ ಸಮಸ್ಯೆಗೆ ನಮ್ಮ ತಕ್ಷಣದ ಧನಾತ್ಮಕ ಪ್ರತಿಕ್ರಿಯೆಎನ್ನಬಹುದು. ಸಂದರ್ಭಗಳನ್ನು ಅರ್ಥಮಾಡಿಕೊಂಡು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ ಜ್ಞಾನವಾಗಬಹುದು. 8. ಕಾರ್ಮಿಕರನ್ನು ತೊಡಗಿಸುಕೊಳ್ಳುವಿಕೆ. ನಮ್ಮನ್ನು ತೊಡಗಿಸಿಕೊಳ್ಳಬೇಕು ಮತ್ತು ನಮಗೂ ತಿಳಿಸಬೇಕು ಎನ್ನುವುದು ಕಾರ್ಮಿಕರ ಮೂಲ ಬಯಕೆಯಾಗಿರುತ್ತದೆ. ಆದ್ದರಿಂದ ಅವರಿಗಾಗಿ ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳು, ಸಲಹಾ ಸಮಿತಿಗಳಲ್ಲಿ ಅವರ ಉಪಸ್ಥಿತಿ, ಕೆಲವೊಂದು ವಿಶೇಷ ದಿನಗಳ ಆಚರಣೆ, ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಂಡರೆ ಅವರ ವಿಶ್ವಾಸ ಮತ್ತಷ್ಟು ಹೆಚ್ಚಬಹುದು. ಓಟ್ಟಾರೆ ಹೇಳುವುದಾದರೆ ಕಾರ್ಮಿಕರ ಹಕ್ಕುಗಳಿಗೆ ಗೌರವ ನೀಡಿ, ಅವರ ಬೆಳವಣಿಗೆಯನ್ನು ಸರಿಯಾಗಿ ನಿರ್ವಹಿಸಿ, ಧನಾತ್ಮಕ ತರಬೇತಿ ನೀಡಿ, ಉತ್ತಮ ತತ್ವಗಳನ್ನು ಅವರಲ್ಲಿ ರೂಪಿಸಿ ಹಾಗು ಕಾರ್ಮಿಕರ ಹಾಗು ಕಂಪನಿಯ ಹಕ್ಕುಗಳನ್ನು ಸರಿಯಾಗಿ ಸರಿದೂಗಿಸಿ/ಸಮತೋಲನ ಸಾಧಿಸಿ ವೃತ್ತಿಪರ ಧೋರಣೆಗಳನ್ನು ಅನುಸರಿಸಿದಲ್ಲಿ ಉತ್ತಮಕೈಗಾರಿಕಾ ಬಾಂಧವ್ಯಗಳನ್ನು ಸಾಧಿಸಿ ಕಂಪನಿಯ ಯಶಸ್ಸಿಗೆ ಮತ್ತು ಕಾರ್ಮಿಕರ ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆ ಸಾಧಿಸಬಹುದು. ಆದರೆ ಕಾರ್ಮಿಕ ನಾಯಕರ ಮತ್ತು ಕಂಪನಿಯ ನಾಯಕರ ಅನ್ಯಾಯೋಚಿತ ನಡವಳಿಕೆಗಳು, ಅಪ್ರಭುದ್ದತೆ, ಪಟ್ಟಭದ್ರ ಹಿತಾಸಕ್ತಿಗಳು ಉತ್ತಮ ಕೈಗಾರಿಕಾ ಸಂಬಂಧಗಳನ್ನು ಸಾಧಿಸಲು ಅಡ್ಡಗಾಲು ಹಾಕಬಹುದು. ಇವುಗಳನ್ನೆಲ್ಲ ಎಷ್ಟರ ಮಟ್ಟಿಗೆ ನಿರ್ವಹಿಸಲಾಗುತ್ತದೆ ಎನ್ನುವುದರ ಮೇಲೆ ಕಂಪನಿಯ ಮತ್ತು ಕಾರ್ಮಿಕರ ಅಳಿವು ಉಳಿವು ಅವಲಂಬಿಸಿರುತ್ತದೆ. ಲೇಖಕರ ಘೋಷಣೆ - ಈ ಲೇಖನದ ಎಲ್ಲಾ ಮಾಹಿತಿಗಳು, ಚಿತ್ರಗಳು, ರೇಖಾಚಿತ್ರಗಳನ್ನು ನನ್ನ ಅನುಭವ, ಯೋಚನೆಗಳು, ಬುದ್ದಿಶಕ್ತಿ ಮತ್ತು ದೂರದೃಷ್ಟಿ ಆಧಾರದ ಮೇಲೆ ಬರೆದಿದ್ದು ಯಾವುದೇ ಮಾಹಿತಿಯನ್ನು ಅಂತರ್ಜಾಲ ಇಲ್ಲವೆ ಯಾವುದೇ ಪುಸ್ತಕಗಳಿಂದ ಆಯ್ದುಕೊಂಡಿಲ್ಲ. ಒಂದು ವೇಳೆ ಹಾಗೇನಾದರೂ ಹೋಲಿಕೆ ಇದ್ದಲ್ಲಿ ಅದು ಕಾಕತಾಳೀಯವಷ್ಟೆ. ಕಾನೂನು ನಿಯಮಗಳನ್ನು ಆಯಾ ಕಾನೂನುಗಳಿಂದ ತೆಗೆದುಕೊಳ್ಳಲಾಗಿದೆ. ಓದುಗರು ಈ ಲೇಖನದ ಕುರಿತು ತಮ್ಮ ಅಭಿಪ್ರಾಯಗಳನ್ನು ಕೆಳಕಂಡ Comment ಬಾಕ್ಸ್ ನಲ್ಲಿ ದಾಖಲಿಸಿ.
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |