ಸಂವಿಧಾನದ ಆಶೋತ್ತರಗಳಿಗನುಗುಣವಾಗಿ ಜನರ ಆಶಯಗಳನ್ನು ಈಡೇರಿಸಲು ನಿರ್ದಿಷ್ಟ ಗುರಿ, ಕಾಲಮಿತಿ ಹಾಗೂ ಆರ್ಥಿಕ ಬೆಂಬಲದೊಂದಿಗೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಎಲ್ಲಾ ಸರ್ಕಾರಗಳ ಆದ್ಯ ಕರ್ತವ್ಯ. ಅಧಿಕಾರಕ್ಕೇರಿದ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದ ವಿಶಿಷ್ಟ ಶೈಲಿಯ ಯೋಜನೆಗಳ ಮೂಲಕ ಇಂತಹ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಿ ಶ್ರೀಸಾಮಾನ್ಯ ಆಶಯಗಳಿಗೆ ಸ್ಪಂದಿಸುವುದು ಸರ್ವೇಸಾಮಾನ್ಯ ಅಥವಾ ವಾಡಿಕೆ. ಇದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣವೂ ಹೌದು. ಸರ್ಕಾರಗಳು ರೂಪಿಸುವ ಕಲ್ಯಾಣ ಕಾರ್ಯಗಳು ಆಡಳಿತಗಾರರ ವಿಚಾರಧಾರೆಗೊಳಪಟ್ಟರೂ ಕೂಡ ಅವುಗಳ ಒಟ್ಟು ಆಶಯ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿರಬೇಕಾಗಿರುತ್ತದೆ. ಯಾವುದೇ ಕಲ್ಯಾಣಕಾರ್ಯದ ಯಶಸ್ಸು ಅದರಲ್ಲಿ ಜನರ ನೇರಪಾಲ್ಗೊಳ್ಳುವಿಕೆ, ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ತತ್ವವನ್ನೇ ಅವಲಂಬಿಸಿರುವುದರಿಂದ ಕಲ್ಯಾಣಕಾರ್ಯಗಳ ಬಗ್ಗೆ ಜನತೆ ಉಪೇಕ್ಷೆ ತೋರಿದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆಯ ಉದ್ಭವ ಸಹಜವಾದರೂ ತಳ್ಳಿಹಾಕುವಂಥದ್ದಲ್ಲದ್ದರ ಜೊತೆಗೆ ಕಲ್ಯಾಣ ಕಾರ್ಯಗಳಲ್ಲಿನ ಲೋಪ ದೋಷಗಳು ಮತ್ತು ಕಾರ್ಯನೀತಿಗಳ ಅವಲೋಕನಕ್ಕೆ ಎಡೆಮಾಡಿಕೊಡುತ್ತವೆ. ಅಂತಹ ಒಂದು ಸನ್ನಿವೇಶಕ್ಕೆ ಇಂದು ನಮ್ಮ ಸರ್ಕಾರಿ ಶಾಲೆಗಳು ಮೂಕ ಸಾಕ್ಷಿಗಳಾಗುತ್ತಿರುವುದು ಪ್ರಸಕ್ತ ಕಾಲಘಟ್ಟದಲ್ಲಿನ ವಿಪರ್ಯಾಸಗಳಲ್ಲೊಂದು. ಭಾರತೀಯ ಸಂವಿಧಾನದ 21ಎ ಅನುಚ್ಛೇದ ಶಿಕ್ಷಣವನ್ನು ಮೂಲಭೂತ ಹಕ್ಕೆಂದು ಖಾತರಿಪಡಿಸಿದೆ. ಈ ಹಿಂದೆ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿದ್ದ ಶಿಕ್ಷಣ ಹಕ್ಕನ್ನು ಸಂವಿಧಾನದ 86ನೇ ತಿದ್ದುಪಡಿ ಕಾಯ್ದೆ 2002 ರ ಮೂಲಕ 21ಎ ಅನುಚ್ಛೇದವನ್ನು ಅಳವಡಿಸುವುದರ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು. ಮೂಲಭೂತ ಹಕ್ಕಾದ ಶಿಕ್ಷಣವನ್ನು ಸಾಕಾರಗೊಳಿಸುವ ಸಲುವಾಗಿ ಸಂಸತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ನ್ನು ರಚಿಸಿತು. ಇದು 2010ರ ಏಪ್ರಿಲ್ 1 ರಂದು ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲರ ಅಧಿಕೃತ ಅಂಕಿತದೊಂದಿಗೆ ಜಾರಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು - 2012 ನ್ನು ಜಾರಿಗೊಳಿಸಿತು. ಇದರ ಪರಿಣಾಮವಾಗಿ ಶಿಕ್ಷಣವೆಂಬ ಮೂಲಭೂತ ಅಗತ್ಯವನ್ನು ಸಾರ್ವತ್ರಿಕರಿಸುವ ಗುರುತರ ಜವಾಬ್ದಾರಿ ಸರ್ಕಾರಗಳ ಆದ್ಯತೆಯಾಯಿತು. ಅದರಲ್ಲೂ ಮುಖ್ಯವಾಗಿ ಆರ್.ಟಿ.ಇ. ಕಾಯ್ದೆಯ ಜೀವಾಳವೆಂದೇ ಬಿಂಬಿಸಲಾಗುವ ಕಾಯ್ದೆಯ ಸೆಕ್ಷನ್ 3(1)ರನ್ವಯ 6-14 ವಯೋಮಿತಿಯ ಎಲ್ಲಾ ಮಕ್ಕಳು ತಮ್ಮ ವಾಸಸ್ಥಳದ (ನೆರೆಹೊರೆಯ) ಹತ್ತಿರವಿರುವ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬಹುದಾಗಿದ್ದು ಆರ್.ಟಿ.ಇ. ಕಾಯ್ದೆಯ ಸೆಕ್ಷನ್ 3(6) ರನ್ವಯ ನೆರೆಹೊರೆಯಲ್ಲಿ ಶಾಲೆಗಳನ್ನು ಸ್ಥಾಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಇದಕ್ಕೆ ಚ್ಯುತಿ ಬಾರದಂತೆ ಸರ್ಕಾರವು ಶಾಲೆಗಳನ್ನು ಸ್ಥಾಪಿಸಿ ನಡೆಸುತ್ತಿರುವುದರ ಜೊತೆಗೆ ಸಮುದಾಯವನ್ನು ತನ್ನತ್ತ ಸೆಳೆಯುವ ಸಲುವಾಗಿ ಹಲವು ಆಕರ್ಷಕ ಯೇಜನೆ ಹಾಗೂ ಅವಕಾಶಗಳನ್ನು ಕಲ್ಪಿಸಿದೆಯಾದರೂ ಅವು ಸಂಪೂರ್ಣ ಯಶಸ್ವಿಯಾದಂತಿಲ್ಲದಿರುವುದಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿನ ಅಂಕಿ ಅಂಶಗಳು ಇಂಬು ನೀಡುವಂತಿವೆ. ರಾಜ್ಯದ 261 ಪ್ರಾಥಮಿಕ ಶಾಲೆಗಳು ಹಾಗೂ 57 ಹಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯೊಂದಿಗೆ ಅಸ್ತಿತ್ವದ ಪ್ರಶ್ನೆಯನ್ನೆದುರಿಸುತ್ತಿದ್ದರೆ ಸಹಸ್ರಾರು ಶಾಲೆಗಳು ಕಡಿಮೆ ದಾಖಲಾತಿ ಹೊಂದುವುದರೊಂದಿಗೆ ಅತಂತ್ರಮಯ ಸ್ಥಿತಿಯಲ್ಲಿ ದಿನದೂಡುತ್ತಿರುವುದು ಇಂದಿನ ಸರ್ಕಾರಿ ಶಾಲೆಗಳ ಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಸರ್ಕಾರಿ ಶಾಲೆಗಳನ್ನು ಸಮುದಾಯದ ಪ್ರಧಾನ ಘಟಕಗಳೆಂದೇ ಪರಿಭಾವಿಸಲಾಗುತ್ತಿತ್ತು. ಗ್ರಾಮೀಣ ಭಾರತದ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಸರ್ಕಾರಿ ಶಾಲೆಗಳು ಕೇವಲ ಪಠ್ಯ ಸಂಬಂಧಿ ಚಟುವಟಿಕೆಗಳಿಗೆ ಸೀಮಿತಗೊಳ್ಳದೇ ಪ್ರಾದೇಶಿಕ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಬಲ್ಲ ಸಂಪರ್ಕ ಸೇತುವೆಗಳಾಗಿದ್ದವು. ಜೂನ್ ಮಾಹೆ ಬಂತೆಂದರೆ ನವೋತ್ಸಾಹದಿಂದ ಶೈಕ್ಷಣಿಕ ವರ್ಷವನ್ನು ಸ್ವಾಗತಿಸುತ್ತಿದ್ದ ಸರ್ಕಾರಿ ಶಾಲೆಗಳಿಗೆ ಸಮುದಾಯದ ಸಂಪೂರ್ಣ ಸಹಕಾರವಿರುತ್ತಿತ್ತು. ಸಮುದಾಯದ ಹಿರಿ-ಕಿರಿ ತಲೆಗಳೆಲ್ಲರೂ ತಮ್ಮ ಪ್ರಥಮ ಆದ್ಯತೆಯನ್ನು ತಮ್ಮೂರಿನ ಸರ್ಕಾರಿ ಶಾಲೆಗಳಿಗೆ ನೀಡುತ್ತಿದ್ದ ಪರಿಣಾಮ ಶಾಲೆಗಳಿಗೆಂದೂ ಮಕ್ಕಳ ಅಭಾವ ಕಾಡುತ್ತಿರಲಿಲ್ಲ. ಆದರೆ ಶಿಕ್ಷಣ ಕ್ಷೇತ್ರದ ಖಾಸಗೀಕರಣದ ತರುವಾಯ ಜಾಗತೀಕರಣ, ಕೈಗಾರೀಕರಣ ಮತ್ತು ಮಾಹಿತಿ - ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರಿ ಶಾಲೆಗಳು ಅಸಮರ್ಥವೆಂಬ ಋಣಾತ್ಮಕ ಆಲೋಚನೆ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದು ಸ್ವಪ್ರತಿಷ್ಠೆಯ ಸಂಕೇತ ಹಾಗೂ ಸರ್ಕಾರಿ ಶಾಲಾ ಶಿಕ್ಷಣವು ಬಡತನದ ಪ್ರತೀಕವೆಂಬ ಕೀಳರಿಮೆ ಮನೋಭಾವ ಸಮುದಾಯದಲ್ಲಿ ಸಮೂಹ ಸನ್ನಿಯಂತೆ ಮೂಡಿದರ ಪರಿಣಾಮ ಶ್ರೀಸಾಮಾನ್ಯರು ಸರ್ಕಾರಿ ಶಾಲೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಯಿತೆನ್ನಬಹುದು. ಇದರ ಪರಿಣಾಮ ಸರ್ಕಾರಿ ಶಾಲೆಗಳ ಗತವೈಭವ ಕ್ರಮೇಣವಾಗಿ ನಶಿಸಿ ಹೋಗಿ ಸದ್ಯ ಅವುಗಳ ಪರಿಸ್ಥಿತಿ ಢಾಳಾಗಿ ಗೋಚರಿಸಲಾರಂಭಿಸಿದೆ. ಉಳ್ಳ ಜನರ ಖಾಸಗೀ ಶಾಲಾ ವ್ಯಾಮೋಹ ಮತ್ತು ಅವುಗಳು ನೀಡುತ್ತಿರುವ ಆಂಗ್ಲ ಭಾಷೆಯ ಶಿಕ್ಷಣ, ಸುಸಜ್ಜಿತ ಮೂಲಸೌಕರ್ಯಗಳು ಹಾಗೂ ನುರಿತ ಬೋಧನಾ ವಿಧಾನಗಳ ಸೆಳೆತದಿಂದಾಗಿ ಉಂಟಾದ ಸಾಮಾಜಿಕ ಪರಿಣಾಮ ಬಡ-ದುರ್ಬಲ ವರ್ಗಗಳ ಮೇಲೆ ಬೀರಿದ ಸಮಕಾಲೀನ ಒತ್ತಡದಿಂದಾಗಿ ಆರ್ಥಿಕ ಶಕ್ತರಲ್ಲದ ಜನರೂ ಸಹ ಸರ್ಕಾರಿ ಶಾಲೆಗಳಿಗೆ ಬೆನ್ನು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ಈ ಒತ್ತಡವನ್ನು ತಗ್ಗಿಸಲು ಗಂಭೀರತೆ ತೋರದ ಸರ್ಕಾರದ ಧೋರಣೆಯಿಂದಾಗಿ ಇದು ಮತ್ತಷ್ಟು ಹೆಚ್ಚಿತೆನ್ನಬಹುದು. ಉಳ್ಳವರು ಹೇರಿದ ಈ ಜೀವನ ಶೈಲಿಗೆ ಸಾಪೇಕ್ಷವಾಗಿ ಹಿಂದೆ ಸಮುದಾಯದಲ್ಲಿ ಇದ್ದ ಸರ್ಕಾರಿ ಶಾಲೆಗಳ ಬಗೆಗಿನ ಪ್ರಾಮುಖ್ಯತೆ ಕಡಿಮೆಯಾಗಿ ಶಿಕ್ಷಣ ಕ್ಷೇತ್ರದ ಖಾಸಗೀಕರಣವು ವ್ಯಾಪಾರೀಕರಣದ ಸ್ವರೂಪ ಪಡೆದ ಪರಿಣಾಮವಾಗಿ ಇಂದು ಶೇ 62% ಕ್ಕೂ ಹೆಚ್ಚು ಪಾಲು ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಂಡಿದ್ದು, ಇದು ಇನ್ನೂ ಹೆಚ್ಚುತ್ತಲೇ ಇದೆ. ಇದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿ ಹೊಸದಾಗಿ ಶಾಲೆ ತೆರೆಯಲು 2017-18ನೇ ಸಾಲಿನಲ್ಲಿ 2292 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 2018-19ನೇ ಸಾಲಿನಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿಂದ 2429 ಶಾಲೆಗಳ ಪ್ರವೇಶಕ್ಕೆ 2500 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಕ್ರಮೇಣವಾಗಿ ಶಿಕ್ಷಣ ಕ್ಷೇತ್ರ ಖಾಸಗಿ ವ್ಯಕ್ತಿಗಳ ಕದಂಬ ಬಾಹುಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತಿದೆ. ಶಿಕ್ಷಣವೆಂಬುದು ಕೇವಲ ವೃತ್ತಿಪರರನ್ನು ಮಾತ್ರ ಸಮಾಜಕ್ಕೆ ಕೊಡುಗೆಯಾಗಿ ನೀಡಲು ಸೀಮಿತಗೊಳ್ಳದೇ ರಾಷ್ಟ್ರದ ಸ್ವಾಸ್ಥ್ಯಯುತ ಸಮಾಜದ ನಿರ್ಮಾಣದ ಪರಿಕಲ್ಪನೆಯೊಂದಿಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಸುಪ್ತ ಮನಸ್ಸಿನಲ್ಲಿನ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಹಾಗೂ ವೈಜ್ಞಾನಿಕ, ಜಾತ್ಯತೀತ ಮನೋಭಾವ ಮತ್ತು ಉದಾತ್ತ, ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವಂತಹ ಭದ್ರ ಬುನಾದಿಯಾಗಿದೆ. ಇದನ್ನೇ 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಗುಣಾತ್ಮಕ ಶಿಕ್ಷಣವೆಂದು ಸ್ಪಷ್ಟಪಡಿಸಿರುವುದರಿಂದ ಇದರ ಗುಣಮಟ್ಟ ಉತ್ಕೃಷ್ಟವಾಗಿಯೂ, ತಾರತಮ್ಯರಹಿತವಾಗಿಯೂ ಸರ್ವರಿಗೂ ದೊರಕಬೇಕೆಂಬುದೇನೋ ನಿರ್ವಿವಾದ. 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಸಾರವೂ ಇದೇ ಆಗಿದ್ದು ಶಿಕ್ಷಣ ನೀತಿ ಅಳವಡಿಸಿಕೊಂಡು 50 ವರ್ಷಗಳೇ ಗತಿಸಿದರೂ ಸಮಾಜದಲ್ಲಿನ ಆರ್ಥಿಕ ಅಸಮಾನತೆ ಮತ್ತು ಸರ್ಕಾರದ ಇಬ್ಬಗೆ ನೀತಿಯಿಂದಾಗಿ ಸಮಾನ ಶಾಲಾ ಶಿಕ್ಷಣವೆಂಬುದು ಇಂದಿಗೂ ಕನಸಾಗಿಯೇ ಉಳಿದಿರುವುದಕ್ಕೆ ಸರ್ಕಾರವೇ ನಡೆಸುತ್ತಿರುವ ವಸತಿಯುತ ಶಾಲೆಗಳ ಉತ್ಕೃಷ್ಟ ಗುಣಮಟ್ಟದ ಶಿಕ್ಷಣಕ್ಕೂ ಹಾಗೂ ಸಾಮಾನ್ಯ ಸರ್ಕಾರಿ ಶಾಲೆಗಳ ಶಿಕ್ಷಣಕ್ಕೂ ಇರುವ ವ್ಯತ್ಯಾಸ ಮತ್ತು ಬಡವರ ಮಕ್ಕಳು ಅಂಗನವಾಡಿ ಕೇಂದ್ರಗಳಿಗೂ ಉಳ್ಳವರ ಮಕ್ಕಳು ಖಾಸಗೀ ಪೂರ್ವ ಪ್ರಾಥಮಿಕ ಶಾಲೆಗಳಿಗೂ ತೆರಳುತ್ತಿರುವುದೇ ತಾಜಾ ನಿದರ್ಶನಗಳೆನ್ನಬಹುದು. ಈ ಕಂದಕವನ್ನು ಸರಿಪಡಿಸಲು ಸರ್ಕಾರದಿಂದಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವಂತೆ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 23/06/2016 ರಂದು ರಚಿಸಲಾದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯು 04/09/2017 ರಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಸಮಂಜಸವಾಗಿದೆ. ಸಮಾನ ಶಾಲಾ ಶಿಕ್ಷಣದ ಕನಸು ಸಾಕಾರಗೊಳ್ಳಬೇಕಾದಲ್ಲಿ ಶಿಕ್ಷಣ ಮಾಧ್ಯಮ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಿರಬೇಕಾದದ್ದು ಅತ್ಯಗತ್ಯ. ಆದರೆ ಶಿಕ್ಷಣ ಮಾಧ್ಯಮ ಗೊಂದಲದ ಜೊತೆಗೆ ಪ್ರಾದೇಶಿಕ ಭಾಷಾ ಅಸ್ಮಿತೆಯು ತಳಕು ಹಾಕಿಕೊಂಡಿರುವುದರಿಂದ ಸಮಸ್ಯೆಯು ಮತ್ತಷ್ಟು ಜಟಿಲವಾಗಿದೆಯೆನ್ನಬಹುದು. ಶಿಕ್ಷಣ ಕ್ಷೇತ್ರಕ್ಕೆ ಭಾಷಾ ಮಾಧ್ಯಮ ಗೊಂದಲ ಹೊಸತೇನಲ್ಲ. 1949ರಲ್ಲಿ ನಡೆದ ಪ್ರಾಂತೀಯ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಶಿಕ್ಷಣ ಮಾಧ್ಯಮ ಮತ್ತು ಪರೀಕ್ಷೆಗಳು ಮಗುವಿನ ಮಾತೃಭಾಷೆಯಲ್ಲಿಯೇ ಇರಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಈ ಸಮ್ಮೇಳನದ ಮುಂದುವರಿದ ಭಾಗವಾಗಿ ಮಾತೃಭಾಷೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣವೆಂಬ ಉಲ್ಲೇಖವುಳ್ಳ ಏಕೈಕ ಪರಿಚ್ಛೇದವಾದ 350ಎ ಯು7ನೇ ತಿದ್ದುಪಡಿಯೊಂದಿಗೆ ಸಂವಿಧಾನಕ್ಕೆ ಸೇರ್ಪಡೆಯಾಯಿತು. ಕರ್ನಾಟಕದಲ್ಲಿಯೂ 80ರ ದಶಕದಲ್ಲಿ ಸರ್ಕಾರಿ ವ್ಯಾಪ್ತಿಯ ಶಾಲೆಗಳಲ್ಲಿ ಪ್ರಾಥಮಿಕ ಹಂತದ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಬೇಕೆಂಬ ಕೆಲ ಸರ್ಕಾರಿ ವರದಿಗಳ ಪರಿಣಾಮವಾಗಿ 1994 ರಲ್ಲಿ ಕರ್ನಾಟಕ ಸರ್ಕಾರವು ಮಾತೃಭಾಷಾ ಶಿಕ್ಷಣ ನೀತಿ ಪ್ರಕಟಿಸಿತು. ಇದನ್ನು ಹಲವರು ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಪ್ರಶ್ನಿಸಿ ಕೊನೆಗೆ ಚೆಂಡು ಸರ್ವೋಚ್ಚ ನ್ಯಾಯಾಲಯದ ಅಂಗಳ ತಲುಪಿತು. 2014ರಲ್ಲಿ ನ್ಯಾಯಾಲಯವು ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವುದು ಪೋಷಕರ ವಿವೇಚನೆಗೆ ಬಿಟ್ಟಿದ್ದೆಂದು, ಮಾತೃಭಾಷೆ ಯಾವುದೆಂದು ಪೋಷಕರು ನಿರ್ಧಾರಿಸಬೇಕೆ ವಿನಃ ರಾಜ್ಯವಲ್ಲವೆಂದು ಹಾಗೂ ಸರ್ಕಾರವು ಕಾನೂನು ಮೂಲಕ ಮಾತೃಭಾಷೆಯನ್ನು ಒತ್ತಾಯಪೂರ್ವಕವಾಗಿ ಶಿಕ್ಷಣ ಸಂಸ್ಥೆಗಳ ಮೇಲೆ ಹೇರುವಂತಿಲ್ಲವೆಂಬ ಮಹತ್ವದ ತೀರ್ಪು ನೀಡಿತು. ಇದಾದ ಬಳಿಕವೂ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಯಾಗಿ ಸಾಂವಿಧಾನಿಕ ಪರಿಹಾರ ಕಂಡುಕೊಳ್ಳಬೇಕೆಂಬ ಆಗ್ರಹ ಸಹಜವಾಗೇ ಇದೆ. ಜೊತೆಗೆ ಮಾತೃಭಾಷೆಯ ಶಿಕ್ಷಣದ ಬುನಾದಿಯ ಮೇಲೆ ಇತರೆಲ್ಲ ಭಾಷೆಗಳ ಶಿಕ್ಷಣವೆಂಬುದು ಭಾಷಾ ತಜ್ಞರ ಅಭಿಪ್ರಾಯವಾಗಿದ್ದು 1953ರಲ್ಲಿ ಯುನೆಸ್ಕೊ ಪ್ರಕಟಿಸಿದ ದೇಶಿಭಾಷೆಗಳ ಬಗೆಗಿನ ಅಧ್ಯಯನದಲ್ಲಿ ಇದು ಸಾಬೀತಾಗಿರುವುದರಿಂದ ನಾವು ಸಮಸ್ಯೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೂ ನೋಡುವುದು ಅಗತ್ಯ. ಆದರೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಮುಂಚಿತವಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ, ವೃತ್ತಿಪರ, ತಾಂತ್ರಿಕತೆ ಮತ್ತು ಪಾಶ್ಚಾತ್ಯ ಸಂಶೋಧನೆ, ಆವಿಷ್ಕಾರ ಪ್ರಗತಿಯ ವಿಚಾರಧಾರೆಗಳು ಮಾತೃಭಾಷೆಯಲ್ಲಿ ಲಭ್ಯವಿದ್ದು ಆಶ್ರಿತರ ಭವಿಷ್ಯವನ್ನು ಬೆಳಗಲು ಮಾತೃಭಾಷೆಯು ಶಕ್ತವೇ ಎಂದು ಖಾತರಿಪಡಿಸಿಕೊಳ್ಳುವುದು ಇಲ್ಲವೆಂದಾದಲ್ಲಿ ಆ ಕೊರತೆಯನ್ನು ನೀಗಿಸಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಇರಬೇಕಾದ ಕಾರ್ಯತಂತ್ರಗಳ ಬಗ್ಗೆ ಅವಲೋಕಿಸುವುದು ಸಮಯೋಚಿತವೆನಿಸೀತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ನೀಡುವುದರ ಜೊತೆಗೆ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಶಿಫಾರಸ್ಸಿನಂತೆ ಖಾಸಗೀ ವಲಯದ ಡಿ ಮತ್ತು ಸಿ ದರ್ಜೆಯ ನೌಕರಿಗಳಿಗೆ 100% ಹಾಗೂ ಉನ್ನತ ಹುದ್ದೆಗಳಿಗೆ 80% ಕನ್ನಡಿಗರ ನೇಮಕಾತಿ ಹಾಗೂ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಕನ್ನಡದಲ್ಲಿದ್ದು ಉತ್ತರವನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸುವುದು ಮತ್ತು ಅದಕ್ಕಾಗಿ ಅಗತ್ಯ ಪದ ಭಂಡಾರ. ಪಠ್ಯ ರಚಿಸುವ ಹೊಣೆಯನ್ನು ಆಯಾ ಇಲಾಖೆಗಳಿಗೆ ನೀಡುವಂತಹ ನಿರ್ಣಯಗಳು ಅಸ್ತಿತ್ವಕ್ಕೆ ಬಂದಾಗ ಮಾತ್ರ ಮಾತೃಭಾಷಾ ಶಿಕ್ಷಣವು ನೈಜ ಮಹತ್ವ ಪಡೆಯಬಲ್ಲದು. ಅದನ್ನು ಬಿಟ್ಟು ಮುಗ್ಧ ಮಕ್ಕಳ ಭವಿಷ್ಯದ ಮೇಲೆ ಭಾಷಾ ಅಸ್ಮಿತೆಯನ್ನು ಹೇರುವುದು ಸರಿಯಲ್ಲ. ಶಿಕ್ಷಣ ಮಾಧ್ಯಮ ಗೊಂದಲಕ್ಕೆ ದ್ವಿಭಾಷಾ ಪಠ್ಯಕ್ರಮ ರಚನೆಯು ಒಂದು ಸರಳ ಉಪಾಯವೆನ್ನಬಹುದು. ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಾತೃಭಾಷೆಯಲ್ಲಿ ವಿವರಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಪಠ್ಯ ರಚಿಸುವುದು ಉತ್ತಮವೆನಿಸುತ್ತದೆ. ಇದಕ್ಕೆ ಮುದ್ರಣ ವೆಚ್ಚ ತುಸು ಹೆಚ್ಚಾಗುತ್ತಾದರೂ ಶಿಕ್ಷಣ ಮಾಧ್ಯಮ ಗೊಂದಲಕ್ಕೆ ಸ್ವಲ್ಪ ಮಟ್ಟಿಗೆ ಮುಲಾಮು ನೀಡಬಲ್ಲದೆನಿಸುತ್ತದೆ. ಒಂದು ವಾಕ್ಯದ ಕೆಳಗೆ ಒಂದರಂತೆ ಮಗುವಿನ ಮಾತೃಭಾಷೆ ಮತ್ತು ಆಂಗ್ಲ ಭಾಷೆಯೆರಡರಲ್ಲೂ ಪಠ್ಯ ರಚಿಸುವುದರಿಂದ ಮಕ್ಕಳ ಜ್ಞಾನೇಂದ್ರಿಯಗಳು ಸಹಜವಾಗಿಯೇ ಇದನ್ನು ಅನುಕರಿಸುತ್ತವೆ. ಅಲ್ಲದೆ ಶಿಕ್ಷಕರಿಗೂ ಬೋಧನೆಗೆ ಸಹಕಾರಿಯಾಗುವ ರೀತಿಯಲ್ಲಿ ಪಠ್ಯಕ್ರಮ ಮತ್ತು ಭಾಷಾರ್ಥ ಲಭ್ಯವಿರುವ ಕಾರಣದಿಂದ ಹತ್ತು ಹಲವು ತರಬೇತಿ ಕಾರ್ಯಗಳಿಗಿಂತ ಇದು ಪರಿಣಾಮಕಾರಿಯೂ ಹೌದು. ಹೀಗೆ ಮಾಡುವುದರಿಂದ ಶಿಕ್ಷಕರ ಭೋದನಾ ಕೌಶಲ್ಯ ಮತ್ತು ವಿಷಯದ ಆಳ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳಲ್ಲೊಂದೆನ್ನಬಹುದು.
ಮಗುವಿನ ಬೌದ್ಧಿಕ ಮಟ್ಟ ಮತ್ತು ಕಲಿಕಾ ಸಾಮರ್ಥ್ಯಕ್ಕೆ ಹೊರೆಯಾಗದಂತೆ ಮಗುವಿನ ಇಚ್ಛೆಯ ಮಾಧ್ಯಮದಲ್ಲಿ ಕಲಿಯಲು ಮತ್ತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ಅಗತ್ಯ. ಈ ಬಹು ಭಾಷಾ ಕಲಿಕಾ (multi language learning) ವಿಧಾನವು ಸರ್ಕಾರಿ ಶಾಲಾ ಮಕ್ಕಳು ಖಾಸಗೀ ಶಾಲಾ ವಿದ್ಯಾರ್ಥಿಗಳೊಂದಿಗೆ ಆರೋಗ್ಯಯುತ ಸ್ಪರ್ಧೆಗಿಳಿಯಲು ಮತ್ತು ವೃತ್ತಿಪರ ತಾಂತ್ರಿಕ ಶಿಕ್ಷಣ ಪಡೆಯುವಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆಯೆಂಬುದನ್ನು ಅಲ್ಲಗಳೆಯಲಾಗದು. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಬೇಕು. ಮೂಲ ಸೌಕರ್ಯ ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆ ಶಿಕ್ಷಣ ಮಾಧ್ಯಮ ಗೊಂದಲದ ನಂತರ ಸರ್ಕಾರಿ ಶಾಲೆಗಳನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದಕ್ಕೆ ಇಂಬು ನೀಡುವಂತೆ 2017ನೇ ಸಾಲಿನಲ್ಲಿ 73129 ಸರ್ಕಾರಿ ಶಾಲೆಗಳ ಕೊಠಡಿಗಳು ದುಸ್ಥಿತಿಯಲ್ಲಿರುವುದರಿಂದ ಇದನ್ನು ಸವಾಲಾಗಿ ಸ್ವೀಕರಿಸಬೇಕಾಗಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತಮ್ಮೂರಿನ ಸರ್ಕಾರಿ ಶಾಲೆಗಳು ಹೇಗಿರಬೇಕೆಂಬ ಮೂಲ ಪರಿಕಲ್ಪನೆಯ ಕೊರತೆ ಸಮುದಾಯದಲ್ಲಿ ಹೇರಳವಾಗಿರುವುದು ಮತ್ತು ಅದನ್ನು ಸಮುದಾಯವು ಗಂಭೀರವಾಗಿ ಪರಿಗಣಿಸದಿರುವುದು ಕಂಡು ಬರುತ್ತದೆ. ಸರ್ಕಾರವು ಮೂಲಸೌಕರ್ಯ ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆಯನ್ನು ನಿರ್ದಿಷ್ಟ ಅವಧಿಯೊಳಗೆ ತುಂಬಿಕೊಳ್ಳುವುದು ಅಗತ್ಯವೆನಿಸಿದರೂ ಸರ್ಕಾರವು ತನ್ನ ಆರ್ಥಿಕ ಚೌಕಟ್ಟಿನೊಳಗೇ ಕಾರ್ಯ ನಿರ್ವಹಿಸಬೇಕಾದ ಕಾರಣದಿಂದಾಗಿ ಇಷ್ಟು ದೊಡ್ಡ ಪ್ರಮಾಣದ ಕೊರತೆಯನ್ನು ಒಮ್ಮಿಂದೊಮ್ಮೆಲೆ ತುಂಬುವುದು ಅಸಾಧ್ಯ ಮತ್ತು ಅತಿಶಯೋಕ್ತಿಯೆನಿಸೀತು. ಆದರೆ 2018-2019ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕರವನ್ನು ಶೇಕಡ 3 ರಿಂದ ಶೇಕಡ 4 ಕ್ಕೇರಿಸಿರುವುದರಿಂದ ದೊರಕುವ ಕೋಟ್ಯಂತರ ಧನವನ್ನು ಸರ್ಕಾರವು ಸೂಕ್ತ ಕಾರ್ಯತಂತ್ರಗಳೊಂದಿಗೆ ಮೂಲ ಸೌಕರ್ಯಾಭಿವೃದ್ಧಿ ಕೊರತೆಯನ್ನು ತುಂಬಿಕೊಳ್ಳಲು ಸದ್ವಿನಿಯೋಗಪಡಿಸಿಕೊಳ್ಳುವುದು ಒಳಿತು. ಆರ್.ಟಿ.ಇ ಕಾಯ್ದೆ 12(1) ಸಿ ರನ್ವಯ ಖಾಸಗೀ ಶಿಕ್ಷಣ ಸಂಸ್ಥೆಗಳು ಶೇ 25% ರಷ್ಟು ಸೀಟುಗಳನ್ನು ಬಿಟ್ಟುಕೊಡಬೇಕಾಗಿದ್ದು ಇದರಡಿಯಲ್ಲಿ ದಾಖಲಾದ ಮಕ್ಕಳ ಪರವಾಗಿ ಸರ್ಕಾರವೇ ಶುಲ್ಕ ಪಾವತಿಸುವ ಕಾರಣದಿಂದಾಗಿ ಸರ್ಕಾರಿ ಶಾಲೆಗಳು ಭಣಗುಡುತ್ತಿವೆ. ಮಕ್ಕಳ ನೆರೆಹೊರೆಯಲ್ಲಿ ಶಾಲೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ನೀಡುವ ಖಾತರಿಯಿದ್ದ ಮೇಲೆ ಸರ್ಕಾರವೇಕೆ ಆರ್.ಟಿ.ಇ ಸೀಟಿಗಾಗಿ ಖಾಸಗೀ ಶಿಕ್ಷಣ ಸಂಸ್ಥೆಗಳ ಮುಂದೆ ಕೈಚಾಚಬೇಕು? ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯನ್ನು ಸರ್ಕಾರವೇ ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ. ಆರ್.ಟಿ.ಇ ಸೀಟಿಗಾಗಿ 2016-17ನೇ ಸಾಲಿನಲ್ಲಿ 390 ಕೋಟಿ ಪಾವತಿಸಲಾಗಿದ್ದು ಪ್ರತಿ ವರ್ಷವೂ ನೂರಾರು ಕೋಟಿ ವ್ಯಯಿಸಲಾಗುತ್ತಿದೆ. ಇದೇ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳುವುದು ಉಚಿತವೆನಿಸೀತು. (ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯು ಆರ್.ಟಿ.ಇ ಸೀಟಿಗಾಗಿ ಶುಲ್ಕ ಪಾವತಿಸುವುದು ಬೇಡವೆಂದು ಶಿಫಾರಸ್ಸು ಮಾಡಿದೆ.) ಆರ್.ಟಿ.ಇ. ಕಾಯ್ದೆಯ ಸೆಕ್ಷನ್ 21 ಮತ್ತು ಆರ್.ಟಿ.ಇ. ಗಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮಗಳು 2012 ರ ನಿಯಮ 13 ರನ್ವಯ ಪಾಲಕರ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರು ಹಾಗೂ ಸಂಘಸಂಸ್ಥೆಗಳ ಸದಸ್ಯರನ್ನೊಳಗೊಂಡ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ರಚನೆಯಾಗಿ ಅಧಿಕಾರವು ತಳಮಟ್ಟದಲ್ಲಿಯೇ ವಿಕೇಂದ್ರೀಕೃತವಾಗಿರುವ ಮತ್ತು ಆರ್.ಟಿ.ಇ. ಕಾಯ್ದೆಯ ಸೆಕ್ಷನ್ 22 ಮತ್ತು ಆರ್.ಟಿ.ಇ. ಗಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮಗಳು 2012 ರ ನಿಯಮ 14 ರನ್ವಯ ಮೂರು ವರ್ಷಗಳ ದೂರದೃಷ್ಟಿಯುಳ್ಳ ಶಾಲಾಭಿವೃದ್ಧಿ ಯೋಜನೆ (school development plan) ಯನ್ನು ತಯಾರಿಸುವ ಅಧಿಕಾರವು ಎಸ್.ಡಿ.ಎಂ.ಸಿ. ಮೂಲಕ ಸಮುದಾಯಕ್ಕೆ ಲಭಿಸಿರುವ ಕಾರಣದಿಂದಾಗಿ ಮೂಲ ಸೌಕರ್ಯ ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆಗೆ ನಾವು ನೇರವಾಗಿ ಸರ್ಕಾರದತ್ತ ಬೊಟ್ಟು ಮಾಡಲಿಕ್ಕಾಗದು. ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಸಮುದಾಯದ ಸಹಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಮತ್ತು ದಕ್ಷ ಶಿಕ್ಷಣವೃಂದದ ಇಚ್ಛಾಶಕ್ತಿಯಿಂದಾಗಿ ಸರ್ಕಾರಿ ಶಾಲೆಯೊಂದು ಖಾಸಗೀ ಶಾಲೆಗಳಿಗೆ ಸೆಡ್ಡುಹೊಡೆಯುವಂತೆ ಪ್ರಗತಿ ಹೊಂದಿರುವ ಸುದ್ದಿಯೊಂದು ಹರಿದಾಡಿ ಸರ್ಕಾರಿ ಶಾಲೆಗಳ ಬಗ್ಗೆ ಹೊಸ ಆಶಾಭಾವ ಮೂಡಿಸಿದೆ. ಆ ಶಾಲೆಯು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕಾಡಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಶಿಕ್ಷಕರ ಸಹಕಾರದಿಂದಾಗಿ ಶಾಲೆಯು ಸುಸಜ್ಜಿತ ಕೊಠಡಿಗಳು, ಸಭಾಂಗಣ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ ಹೊಂದಿದ್ದು, ಈಗ ಆಂಗ್ಲ ಭಾಷೆಯ ಮಲ್ಟಿ ಮೀಡಿಯಾ ಲ್ಯಾಬ್ ಹೊಂದುವ ಪ್ರಯತ್ನದಲ್ಲಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಈ ಶಾಲೆಯು 200 ಮಕ್ಕಳನ್ನು ಹೊಂದಿದೆ. ಇದಕ್ಕೆ ಅವಿರತವಾಗಿ ಶ್ರಮಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್, ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ಹಾಗೂ ಶಿಕ್ಷಕರು ಸಮಾಜಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯವಾಗಿದ್ದಾರೆ. ಇದೊಂದು ಉದಾಹರಣೆ ಅಷ್ಟೇ. ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿದ್ದು ಶಾಲಾಭಿವೃದ್ಧಿಗಾಗಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಸೂಕ್ತ ಕಾರ್ಯತಂತ್ರಗಳೊಂದಿಗೆ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಕ್ರೋಢೀಕರಿಸುವ ಮತ್ತು ಪಂಚಾಯತ್ ರಾಜ್ನ ಸ್ಥಾಯಿ ಸಮಿತಿಗಳಲ್ಲೊಂದಾದ ನಾಗರೀಕ ಸೌಕರ್ಯ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಶಾಲಾಭಿವೃದ್ಧಿ ಯೋಜನೆ ಅಡಿಯ ಕ್ಷೇತ್ರಗಳಾದ ಶಾಲಾ ಪರಿಸರ, ಭೋಧನಾ ಕಲಿಕಾ ಪ್ರಕ್ರಿಯೆ, ಶೈಕ್ಷಣಿಕಾಭಿವೃದ್ಧಿಯಂತಹ ವಿಷಯಗಳಲ್ಲಿ ಪ್ರಗತಿ ಸಾಧಿಸುವ ಮತ್ತು ನ್ಯೂನತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಗಳು ಸರ್ಕಾರಗಳಾಧಿಯಾಗಿ ಅಧಿಕಾರಿಗಳಿಂದ ಹಾಗೂ ಶ್ರೀಸಾಮಾನ್ಯರಿಂದ ಜರುಗಬೇಕಿದೆ.
0 Comments
Leave a Reply. |
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |